ಧನುಷ್ ಮತ್ತೆ ಬಾಲಿವುಡ್‌ಗೆ

Update: 2019-06-08 18:33 GMT

ಕಾಲಿವುಡ್‌ನ ಸೂಪರ್‌ಸ್ಟಾರ್ ಧನುಷ್ ಅಭಿನಯದ ಚೊಚ್ಚಲ ಹಾಲಿವುಡ್ ಚಿತ್ರ ‘ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ಫಕೀರ್’ನ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್‌ನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮುಂಬೈಯಲ್ಲಿ ನಡೆದಿದ್ದು, ಧನುಷ್ ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಸದ್ಯದಲ್ಲೇ ತಾನು ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದೇನೆಂಬ ಸುಳಿವು ನೀಡುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ.
‘ರಾಂಜಾನಾ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಧನುಷ್ ಆನಂತರ ಅಮಿತಾಭ್ ಬಚ್ಚನ್ ಜೊತೆ ‘ಶಮಿತಾಭ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ, ಈ ಪ್ರತಿಭಾವಂತ ನಟ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಆನಂದ್ ಎಲ್.ರಾಯ್ ಅವರ ಮುಂದಿನ ಪ್ರಾಜೆಕ್ಟ್‌ನಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ರಾಂಜಾನಾ ಚಿತ್ರವನ್ನೂ ಆನಂದ್ ರಾಯ್ ಅವರೇ ನಿರ್ದೇಶಿಸಿದ್ದು, ಈ ಚಿತ್ರವು ಭರ್ಜರಿ ಯಶಸ್ಸು ಕಂಡಿತ್ತು. ರಾಂಜಾನಾ ಚಿತ್ರ ಬಿಡುಗಡೆಯಾಗಿ ಆರು ವರ್ಷಗಳು ಕಳೆದಿವೆ. ಇದೀಗ ತನಗೆ ಬಾಲಿವುಡ್‌ನಲ್ಲಿ ಆನಂದ್ ಅವರಂತಹ ಶ್ರೇಷ್ಠ ನಿರ್ದೇಶಕರ ಮತ್ತು ಅದ್ಭುತವಾದ ಸ್ಕ್ರಿಪ್ಟ್ ಇರುವ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ ಎಂದು ಧನುಷ್ ಸಂತಸ ಹಂಚಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News