×
Ad

ವೈಮಾನಿಕ ಹಗರಣ ಪ್ರಕರಣ: ತನಿಖಾ ಸಂಸ್ಥೆ ಮುಂದೆ ಹಾಜರಾದ ಪ್ರಫುಲ್ ಪಟೇಲ್

Update: 2019-06-10 21:37 IST

ಹೊಸದಿಲ್ಲಿ, ಜೂ.10: ಬಹುಕೋಟಿ ರೂ. ವೈಮಾನಿಕ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ನಾಗರಿಕ ವಾಯುಯಾನ ಸಚಿವ ಮತ್ತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು.

ಬಹುಕೋಟಿ ರೂ. ವೈಮಾನಿಕ ಹಗರಣದಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಉಂಟಾಗಿರುವ ನಷ್ಟಕ್ಕೆ ಸಂಬಂಧಿಸಿದ ಹಣ ವಂಚನೆ ಪ್ರಕರಣದಲ್ಲಿ ಹೇಳಿಕೆ ನೀಡಲು ಪಟೇಲ್ ತನಿಖಾ ಸಂಸ್ಥೆಯ ಮುಂದೆ ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟೇಲ್ ಅವರ ಹೇಳಿಕೆಯನ್ನು ಹಣವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ದಾಖಲಿಸಿಕೊಳ್ಳಲಾಗುವುದು ಮತ್ತು ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತರ್‌ರಾಷ್ಟ್ರೀಯ ವಿಮಾನಯಾನಗಳಿಗೆ ಯಾನಗಳನ್ನು ನಿಗದಿಪಡಿಸುವಲ್ಲಿ ಅವ್ಯವಹಾರ ನಡೆಸಿದ ಪರಿಣಾಮ ರಾಷ್ಟ್ರೀಯ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ನಷ್ಟ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಆರೋಪಿಗಳ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು.

 2004 ಮತ್ತು 2011ರ ಮಧ್ಯೆ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಉಲ್ಲೇಖಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಯಾನ ಲಾಬಿಕಾರ ದೀಪಕ್ ತಲ್ವಾರ್ ನೀಡಿರುವ ಹೇಳಿಕೆಯನ್ನು ಆಧರಿಸಿ ತನಿಖಾ ಸಂಸ್ಥೆ 62ರ ಹರೆಯದ ಪಟೇಲ್ ಅವರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News