×
Ad

ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಯ ಪುನರ್‌ ಮಂಡನೆಗೆ ಸರಕಾರದ ಚಿಂತನೆ

Update: 2019-06-10 21:43 IST

ಹೊಸದಿಲ್ಲಿ,ಜೂ.10: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಸುಧಾರಣೆಗಳನ್ನು ತರುವ ಉದ್ದೇಶ ಹೊಂದಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಸೂದೆಯನ್ನು ಜೂ.17ರಿಂದ ಆರಂಭಗೊಳ್ಳಲಿರುವ ನೂತನ ಲೋಕಸಭೆಯ ಮೊದಲ ಅಧಿವೇಶನದಲ್ಲಿಯೇ ಪುನರ್‌ಮಂಡಿಸಲು ಕೇಂದ್ರ ಸರಕಾರವು ಉದ್ದೇಶಿಸಿದೆ.

2017,ಡಿಸೆಂಬರ್‌ನಲ್ಲಿ ಮಂಡಿಸಲಾಗಿದ್ದ ಈ ಮಸೂದೆಯು 16ನೇ ಲೋಕಸಭೆಯು ವಿಸರ್ಜನೆಗೊಳ್ಳುವುದರೊಂದಿಗೆ ಅನೂರ್ಜಿತಗೊಂಡಿತ್ತು.

ಸಾರ್ವತ್ರಿಕ ಚುನಾವಣೆೆಗಳ ಬಳಿಕ ನೂತನ ಸರಕಾರವು ರಚನೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಶಾಸಕಾಂಗ ಪ್ರಕ್ರಿಯೆಯನ್ನು ಮತ್ತೆ ಹೊಸದಾಗಿ ಆರಂಭಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಹೊಸ ಕರಡು ಮಸೂದೆಯನ್ನು ಶೀಘ್ರವೇ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿದವು.

ಕರಡು ಎನ್‌ಎಂಸಿ ಮಸೂದೆಯು ಕಾನೂನು ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ,1956ನ್ನು ಸ್ಥಾನಪಲ್ಲಟಗೊಳಿಸುವ ಉದ್ದೇಶದ ಮತ್ತು ಪರ್ಯಾಯ ವೈದ್ಯಪದ್ಧತಿಗಳ ವೈದ್ಯರು ಅಲೋಪತಿ ಸೇವೆಯನ್ನು ಒದಗಿಸಲು ಅವಕಾಶ ನೀಡುವ ‘ಸಂಕ್ಷಿಪ್ತ ಕೋರ್ಸ್’ನ ವಿವಾದಾಸ್ಪದ ನಿಯಮವನ್ನು ಸೇರಿಸಲಾಗಿದ್ದ ಮಸೂದೆಯನ್ನು 2017ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಬಳಿಕ ವೈದ್ಯಕೀಯ ಸಮುದಾಯದಿಂದ ಭಾರೀ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು.

ಸಮಿತಿಯು 2018,ಮಾರ್ಚ್‌ನಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿದ ಬಳಿಕ ಆರೋಗ್ಯ ಸಚಿವಾಲಯವು ಅಧಿಕೃತ ತಿದ್ದುಪಡಿಗಳನ್ನು ಲೋಕಸಭೆಗೆ ಸಲ್ಲಿಸುವ ಮುನ್ನ ವಿವಾದಾಸ್ಪದ ನಿಯಮವನ್ನು ಕೈಬಿಟ್ಟಿತ್ತು ಮತ್ತು ಸಮಿತಿಯು ಸೂಚಿಸಿದ್ದಂತೆ ಇತರ ಕೆಲವು ಬದಲಾವಣೆಗಳನ್ನು ಮಾಡಿತ್ತು. ಅಧಿಕೃತ ತಿದ್ದುಪಡಿಗಳಿಗೆ ಸಂಪುಟದ ಒಪ್ಪಿಗೆ ದೊರೆತ ಬಳಿಕ ಅವುಗಳನ್ನು ಲೋಕಸಭೆಯಲ್ಲಿ ಪ್ರತ್ಯೇಕವಾಗಿ ಮಂಡಿಸಲಾಗಿತ್ತು. ಈಗ ಎನ್‌ಎಂಸಿ ಮಸೂದೆಯನ್ನು ಹೊಸದಾಗಿ ರಚಿಸಲಾಗಿದ್ದು ಸಂಸದೀಯ ಸಮಿತಿಯು ಸೂಚಿಸಿದ್ದ ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

 ತನ್ಮಧ್ಯೆ ಭಾರತೀಯ ವೈದ್ಯಕೀಯ ಮಂಡಳಿಯ ಚುನಾಯಿತ ಸಮಿತಿಯ ಅಧಿಕಾರಾವಧಿ ಅಂತ್ಯಗೊಳ್ಳಲಿದ್ದರಿಂದ ಸರಕಾರವು ಅದನ್ನು ವಿಸರ್ಜಿಸಿತ್ತು ಮತ್ತು ಏಳು ಸದಸ್ಯರ ಆಡಳಿತ ಮಂಡಳಿಯನ್ನು ನೇಮಕಗೊಳಿಸಿ ಕಳೆೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಧ್ಯಾದೇಶವನ್ನು ಹೊರಡಿಸಿತ್ತು. ಈ ಮಂಡಳಿಯು ತನ್ನ ಕಾರ್ಯವನ್ನು ಮುಂದುವರಿಸುವಂತಾಗಲು ಆರೋಗ್ಯ ಸಚಿವಾಲಯವು ಈಗ ಅಧ್ಯಾದೇಶದ ಸ್ಥಾನದಲ್ಲಿ ಮಸೂದೆಯೊಂದನ್ನು ಮಂಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News