ಕಾರ್ನಾಡರನ್ನು ಪರಿಚಯಿಸಿದ ಮನೋಹರ ಗ್ರಂಥಮಾಲೆ

Update: 2019-06-10 18:35 GMT

ಕಾಲೇಜಿನಲ್ಲಿದ್ದಾಗ ಧಾರವಾಡದ ಮನೋಹರ ಗ್ರಂಥ ಮಾಲೆ ನನ್ನ ಪಾಲಿಗೆ ತುಂಬಾ ಮೇಲ್ಮಿಟ್ಟದ ಲ್ಲಿತ್ತು. ಅಟ್ಟದಲ್ಲಿತ್ತು. ಕೀರ್ತಿನಾಥ ಕುರ್ತಕೋಟಿ ಎಂಬ ಪ್ರಾಧ್ಯಾಪಕರು ಸಾಹಿತ್ಯದ ಕುರಿತೇ ಮಾತನಾಡು ತ್ತಿರುತ್ತಾರೆ. ಅವರಿಗೆ ಮನೋಹರದ ಜೊತೆ ಸಂಪರ್ಕವಿದೆಯೆಂದು ನನ್ನ ಆಪ್ತಮಿತ್ರ ಕೃಷ್ಣ ಬಸ್ರೂರು ತಿಳಿಸಿದ. ಬಳಿಕ ಒಂದೆರಡು ಸರ್ತಿ ಮನೋಹರಕ್ಕೆ ಹೋದೆನಾದರೂ ಅಲ್ಲಿ ನನ್ನನ್ನು ಕೇಳುವವರಿರಲಿಲ್ಲ. ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಮುಗಿಯುತ್ತಲೇ ಎಂ.ಎ ಓದಲು ಮುಂಬೈಗೆ ತೆರಳಿದೆ. ಅಲ್ಲಿ ಅಲ್ಕಾಝಿಯ ‘ಆ್ಯಂತಿಗನಿ’ ಮತ್ತು ‘ಮಿಸ್ ಜೂಲಿ’ ನಾಟಕಗಳನ್ನು ನೋಡಿ ದಂಗುಬಡಿದುಹೋದೆ. ಅವು ಆಧುನಿಕತೆ, ಆಧುನಿಕ ಲೋಕ, ಆಧುನಿಕ ವಿಷಯ ಗಳನ್ನು ನನ್ನೆದುರು ತೆರೆದಿಟ್ಟವು. ನಾಟಕಗಳಲ್ಲಿ ಬೆಳಕು ಮಂದಗೊಳ್ಳುವುದನ್ನು ನಾನು ಅಲ್ಲಿ ಮೊದಲ ಬಾರಿಗೆ ಕಂಡೆ. ಮೂರ್ಖನಂತೆ ಅದು ಹೇಗೆಂದು ನಮ್ಮ ತಂಡದಲ್ಲಿದ್ದ ಅಶೋಕ್ ಕುಲಕರ್ಣಿಯಲ್ಲಿ ಕೇಳಿದಾಗ, ಆತ ತಂಡದ ಮತ್ತೊಬ್ಬ ಸದಸ್ಯ ಮೇಘನಾದ ದೇಸಾಯಿಯಲ್ಲಿ (ಈಗ ಲಾರ್ಡ್) ವಿಚಾರಿಸಿದ. ಡಿಮ್ಮರ್ ಬಳಕೆ ಬಗ್ಗೆ ಆಗ ಗೊತ್ತಾಯಿತು. ಅದುವರೆಗೆ ಕಂಪೆನಿ ನಾಟಕ ನೋಡಿದ್ದ ನನಗೆ ನಾಟಕ ಅಂದರೇನೆಂದು ಆಗ ತಿಳಿಯಿತು. ಅದರ ನಂತರ ನಾನು ಬದಲಾದೆ. ಎಂ.ಎ.ಯಲ್ಲಿ ಆಸಕ್ತಿ ಕಮ್ಮಿಯಾಯಿತು. ಹೆಚ್ಚೆಚ್ಚು ನಾಟಕ ನೋಡತೊಡಗಿದೆ. ಪರೀಕ್ಷೆಗೆ ಕೂರಲಿಲ್ಲವೆಂದು, ಇನ್ನಿತರ ಕಾರಣಗಳಿಗಾಗಿಯೂ ಬಹಳ ಖಿನ್ನನಾಗಿದ್ದಾಗ ಒಂದು ದಿನ ಏನು ಮಾಡಬೇಕು ಎಂದು ತಿಳಿಯದೆ ರಾಜಾಜಿಯವರ ಮಹಾಭಾರತ ಕೈಗೆತ್ತಿಕೊಂಡೆ. ಮಗನ ಯೌವನ ತನಗೆ ಬೇಕೆಂದ ಯಯಾತಿಯ ಕಥೆ ಓದುತ್ತಿದ್ದಂತೆ ಥಟ್ಟನೆ ನನಗೆ ‘ಯಯಾತಿ’ ನಾಟಕದ ಕಥೆ ಹೊಳೆಯಿತು.

ನಾನು ವಿದೇಶಕ್ಕೆ ಹೋಗಲಿರುವ ವಿಚಾರ ತಿಳಿಯುತ್ತಿ ದ್ದಂತೆ ನನ್ನ ಹೆತ್ತವರು ಆತಂಕಿತರಾಗಿದ್ದರು. ಅಲ್ಲೇ ಉಳಿದು ಬಿಡುತ್ತಾನೇನೊ, ಬಿಳಿ ತೊಗಲಿನವಳನ್ನು ಕಟ್ಟಿಕೊಳ್ಳುತ್ತಾನೇನೊ ಇತ್ಯಾದಿ. ಅವರು ನನ್ನೊಂದಿಗೆ ಮಾಡುತ್ತಿದ್ದ ವರಾತ ಯಯಾತಿ ಪುರುವಿನೊಂದಿಗೆ ಮಾಡಿದಂತಿತ್ತು. ನನ್ನ ಮನಸ್ಸಿನಲ್ಲಿದ್ದ ಭಾವನೆಗಳೆಲ್ಲವೂ ನಾಟಕ ರೂಪದಲ್ಲಿ ಹೊರಬಿದ್ದವು. ನಾನು ‘ಯಯಾತಿ’ ಬರೆದೆ. ಬರೆದ ಮೇಲೆ ಪುರಾಣಗಳ ಜೊತೆ ನನಗಿದ್ದ ಸಂಬಂಧದ ಕುರಿತು ನನಗೆ ಆಶ್ಚರ್ಯವಾಗಿದೆ. ನಾನು ಇಂಗ್ಲಿಷ್ ಕವಿಯಾಗಿ ನೊಬೆಲ್ ಪಾರಿತೋಷಕದ ಕನಸು ಕಾಣುತ್ತಿದ್ದವನು. ನನಗೆ ಕವಿಯಾಗಬೇಕೆಂದಿತ್ತೇ ಹೊರತು ನಾಟಕಕಾರನಲ್ಲ. ಆದರೂ ಇಡೀ ನಾಟಕವನ್ನು ಕನ್ನಡದಲ್ಲಿ ಒಬ್ಬ ಟೈಪಿಸ್ಟ್‌ನಂತೆ ಬರೆದು ಮುಗಿಸಿದಾಗ ಭಾರೀ ಉದ್ವೇಗಕ್ಕೊಳಗಾಗಿದ್ದೆ. ನಾಟಕವನ್ನು ಮನೋಹರ ಗ್ರಂಥ ಮಾಲೆಯ ಜಿ.ಬಿ. ಜೋಶಿಯವರ ಕೈಗಿತ್ತೆ. ನಾಲ್ಕೈದು ದಿನಗಳ ಬಳಿಕ ಧಾರವಾಡಕ್ಕೆ ಮರಳಿ ಜೋಶಿಯವರಲ್ಲಿ ವಿಚಾರಿಸಿದೆ. ಅವರ ಪ್ರತಿಕ್ರಿಯೆಯಿಂದ ನನಗೆ ನಿರಾಸೆಯಾಯಿತು. ನನ್ನ ನಾಟಕ ರಚನೆ ಇಲ್ಲಿಗೇ ಮುಗಿಯಿತೆಂದುಕೊಂಡು ಹಸ್ತಪ್ರತಿಯೊಂದಿಗೆ ಮುಂಬೈಗೆ ಬಂದು ಇಂಗ್ಲೆಂಡಿಗೆ ಹಡಗು ಹತ್ತಿದೆ. ಆಕ್ಸ್‌ಫರ್ಡ್‌ನಲ್ಲಿ ಮೊದಲನೇ ಟರ್ಮ್‌ನಲ್ಲಿದ್ದಾಗ ಕುರ್ತಕೋಟಿಯವರ ಪತ್ರ ಬಂತು. ಹಸ್ತಪ್ರತಿ ಕಳುಹಿಸಿಕೊಡಿರೆಂದು ಬರೆದಿದ್ದರು. ನಾನು ಪುಳಕಿತನಾದೆ. ಅವರ ಅಪೇಕ್ಷೆಯ ಮೇರೆಗೆ ನಾಟಕವನ್ನು ಪರಿಷ್ಕರಿಸಿ ಕಳುಹಿಸಿದೆ. ಅವರು ನನ್ನ ಕನ್ನಡ ಚೆನ್ನಾಗಿಲ್ಲವೆಂದು ಹೇಳಿ ಅದನ್ನು ಮತ್ತಷ್ಟು ಪರಿಷ್ಕರಿಸಿದ ನಂತರ ಕೊನೆಗೊಮ್ಮೆ ಅದು ಪ್ರಕಟವಾಯಿತು. ಅದಕ್ಕೆ ವಿವಿಧ ರೂಪದ ಪ್ರತಿಕ್ರಿಯೆಗಳು ಬಂದವು. ಯಯಾತಿ ಯಾವಾಗ ಪ್ರಕಟಗೊಂಡಿತೋ ಆಗ ನಾನು ಭಾರತಕ್ಕೆ ಮರಳಿ ಕನ್ನಡದ ಲೇಖಕನಾಗಲು ನಿರ್ಧರಿಸಿದೆ. ಕನ್ನಡ ನಾಟಕಗಳಿಗೆ ಬೇಡಿಕೆಯೇ ಇಲ್ಲದ ಕಾಲದಲ್ಲಿ ಯಯಾತಿಯನ್ನು ಪ್ರಕಟಿಸಿದ ಮನೋಹರ ಗ್ರಂಥಮಾಲೆಗೆ, ಜಿ.ಬಿ. ಜೋಶಿಯವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ಯಯಾತಿ ನಂತರ ನನ್ನ ಇಡೀ ಬದುಕಿನಲ್ಲಿ ಪರಿವರ್ತನೆಯಾಗಿದೆ.

(ಕಥೆಗಾರ ವಿವೇಕ್ ಶಾನ್‌ಬಾಗ್ ಸಂದರ್ಶನದಲ್ಲಿ ಹಂಚಿಕೊಂಡದ್ದು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News