ಸಹಿಸಲಸಾಧ್ಯ ತಾಪಮಾನ: ರೈಲಿನಲ್ಲಿದ್ದ ನಾಲ್ವರು ಪ್ರಯಾಣಿಕರು ಮೃತ್ಯು

Update: 2019-06-11 14:29 GMT

ಝಾನ್ಸಿ, ಜೂ.11: ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಅತೀವ ಉಷ್ಣಾಂಶದಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಮೃತರ ಪೈಕಿ ಮೂವರು ಸೋಮವಾರ ರೈಲಿನಲ್ಲಿ ನಿಧನರಾಗಿದ್ದಾರೆ ಓರ್ವ ಪ್ರಯಾಣಿಕ ಮಂಗಳವಾರ ರೈಲ್ವೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮೃತರನ್ನು ಬಾಲಕೃಷ್ಣ ರಾಮಸ್ವಾಮಿ, ಪಿ.ಕಮಲ. ಸುಬ್ಬರಾಯ ಮತ್ತು ದಿವ ನಾಯರ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಆಗ್ರಾದಿಂದ ತಮ್ಮ ಊರಿಗೆ ತೆರಳುತ್ತಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಮೃತರೆಲ್ಲರೂ ರೈಲಿನ ಎಸ್-8 ಮತ್ತು ಎಸ್-9 ಕೊಚ್‌ನಲ್ಲಿ ಪ್ರಯಾಣಿಸುತ್ತಿದ್ದ 67 ಸದಸ್ಯರ ತಂಡದ ಭಾಗವಾಗಿದ್ದರು ಎಂದು ರೈಲ್ವೇ ವಕ್ತಾರ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ರೈಲು ಗ್ವಾಲಿಯರ್ ಸಮೀಪಿಸುತ್ತಿದ್ದಂತೆ ನಾಲ್ವರು ಪ್ರಯಾಣಿಕರು ಉಸಿರಾಟದ ತೊಂದರೆ ಅನುಭವಿಸಿ ಪ್ರಜ್ಞಾಹೀನರಾದರು. ಈ ಬಗ್ಗೆ ಕೂಡಲೇ ಝಾನ್ಸಿಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ವೈದ್ಯಕೀಯ ಸಹಾಯಕ್ಕೆ ಮನವಿ ಮಾಡಲಾಯಿತು. ಝಾನ್ಸಿಯಲ್ಲಿ ವೈದ್ಯರು ಅವರನ್ನು ತಪಾಸಣೆ ನಡೆಸಿದರು. ಆದರೆ ಆಗಲೇ ಮೂವರು ಇಹಲೋಕ ತ್ಯಜಿಸಿದ್ದರು ಮತ್ತು ಓರ್ವ ಪ್ರಯಾಣಿಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News