ವಿದ್ಯಾಸಾಗರರ ನೂತನ ಪ್ರತಿಮೆ ಅನಾವರಣಗೊಳಿಸಿದ ಮಮತಾ

Update: 2019-06-11 13:46 GMT

ಕೋಲ್ಕತಾ, ಜೂ.11: ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಅವರ ನೂತನ ಪ್ರತಿಮೆಯನ್ನು ಕಾಲೇಜು ಸ್ಟ್ರೀಟ್‌ನಲ್ಲಿರುವ ಶಾಲಾ ಮೈದಾನದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಾವರಣಗೊಳಿಸಿದರು.

ಟಿಎಂಸಿ ಮುಖಂಡರು, ಪಶ್ಚಿಮ ಬಂಗಾಳ ಸರಕಾರದ ಸಚಿವರು, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಗದಿತ ಕಾರ್ಯಕ್ರಮದಂತೆ ಅನಾವರಣಗೊಂಡ ಪ್ರತಿಮೆಯನ್ನು ಹರೆ ಶಾಲಾ ಮೈದಾನದಿಂದ ಸ್ಥಳಾಂತರಿಸಿ, ವಿದ್ಯಾಸಾಗರ ಕಾಲೇಜಿನಲ್ಲಿ ಪ್ರತಿಷ್ಠಾಪಿಸಲಾಗುವುದು. ವಿದ್ಯಾಸಾಗರ ಕಾಲೇಜಿನಲ್ಲಿದ್ದ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಕಳೆದ ಮೇ ತಿಂಗಳಿನಲ್ಲಿ ನಡೆದ ರಾಜಕೀಯ ಗಲಭೆಯ ಸಂದರ್ಭ ಹಾನಿಗೀಡಾಗಿತ್ತು. ಪ್ರತಿಮೆ ಧ್ವಂಸಗೊಳಿಸಿದ ಬಳಿಕ ಬಿಜೆಪಿ ಇದೀಗ ಬಿಜೆಪಿ ಬಂಗಾಳದ ಸಂಸ್ಕೃತಿಯನ್ನು ಹಾಳುಗೆಡವಲು ಯತ್ನಿಸುತ್ತಿದೆಯೇ ಎಂದು ಪ್ರಶ್ನಿಸಿದ ಮಮತಾ, ಬಂಗಾಳವು ಗುಜರಾತ್ ಅಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು ಎಂದರು.

ಚುನಾವಣೋತ್ತರ ಹಿಂಸಾಚಾರದಲ್ಲಿ ರಾಜ್ಯದಲ್ಲಿ 10 ಮಂದಿ ಪ್ರಾಣತೆತ್ತಿದ್ದು ಇದರಲ್ಲಿ 8 ಮಂದಿ ಟಿಎಂಸಿ ಕಾರ್ಯಕರ್ತರು. ಇಬ್ಬರು ಬಿಜೆಪಿ ಕಾರ್ಯಕರ್ತರು. ಎಲ್ಲಾ ಸಾವೂ ದುರದೃಷ್ಟಕರ. ಮೃತಪಟ್ಟ ಎಲ್ಲಾ ವ್ಯಕ್ತಿಗಳ ಕುಟುಂಬದವರಿಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸುತ್ತೇನೆ ಎಂದು ಮಮತಾ ಹೇಳಿದರು.

ಪ್ರತಿಮೆ ಧ್ವಂಸಗೊಂಡ ಸ್ಥಳದಲ್ಲಿ ಪಂಚಲೋಹದಲ್ಲಿ ನಿರ್ಮಿಸಿದ ನೂತನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮೇ 16ರಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಆದರೆ ಮೋದಿಯ ಪ್ರಸ್ತಾವನೆಯನ್ನು ಸಾರ್ವಜನಿಕ ಸಭೆಯಲ್ಲಿ ನಿರಾಕರಿಸಿದ್ದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ರಾಜ್ಯದ ಬಳಿ ಪ್ರತಿಮೆ ನಿರ್ಮಿಸಲು ಅಗತ್ಯವಿರುವ ಹಣ ವಿದೆ ಎಂದು ಹೇಳಿದ್ದರು.

ಮಂಗಳವಾರ ನಡೆದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ವಿದ್ಯಾಸಾಗರರ 200ನೇ ಜನ್ಮದಿನಾಚರಣೆ ಸಮಿತಿಯ ಸಹಯೋಗದಲ್ಲಿ ಪಶ್ಚಿಮ ಬಂಗಾಳದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಹರೆ ಶಾಲೆಯ ಆವರಣದಲ್ಲಿ ವಿದ್ಯಾಸಾಗರರ 8.5 ಅಡಿ ಎತ್ತರದ ಫೈಬರ್‌ಗ್ಲಾಸ್‌ನ ಪ್ರತಿಮೆಯನ್ನೂ ಮಮತಾ ಅನಾವರಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News