ಸುಪ್ರೀಂ ಕೋರ್ಟ್ ಸುರಕ್ಷತೆಯ ಭರವಸೆ ನೀಡಿದರೆ ಭಾರತಕ್ಕೆ ಮರಳುವೆ: ಝಾಕಿರ್ ನಾಯ್ಕ್

Update: 2019-06-11 14:26 GMT

ಮುಂಬೈ, ಜೂ.11: “ನಾನು ನಿಜವಾಗಿಯೂ ಅಪರಾಧಿ ಎಂದು ಸಾಬೀತಾಗುವವರೆಗೆ ನನ್ನನ್ನು ಬಂಧಿಸುವುದಿಲ್ಲ ಮತ್ತು ಜೈಲಿಗೆ ಹಾಕುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಲಿಖಿತ ಭರವಸೆ ನೀಡುವುದಾದರೆ ನಾನು ಭಾರತಕ್ಕೆ ಮರಳುತ್ತೇನೆ ಎಂದು ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಮಂಗಳವಾರ ತಿಳಿಸಿದ್ದಾರೆ.

ನನಗೆ ಭಾರತದ ನ್ಯಾಯಾಂಗದ ಮೇಲೆ ನಂಬಿಕೆಯಿದ್ದರೂ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂದು ನಾಯ್ಕ್ ತಿಳಿಸಿದ್ದಾರೆ. ಹಲವು ಆರೋಪಗಳು ಮತ್ತು ದೂರುಗಳ ಹೊರತಾಗಿಯೂ ನನ್ನ ವಿರುದ್ಧ ಭಾರತ ಅಥವಾ ಜಗತ್ತಿನ ಇತರ ಯಾವುದೇ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡಿಲ್ಲ. ಭಾರತದ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ ಮುಸ್ಲಿಮರನ್ನು ಬಂಧಿಸಿ ಹಲವು ವರ್ಷಗಳ ಕಾಲ ಜೈಲಿಗಟ್ಟಿ ನಂತರ ನ್ಯಾಯಾಲಯ ಅವರನ್ನು ಮುಗ್ಧರೆಂದು ಬಿಡುಗಡೆ ಮಾಡಿದ ಪ್ರಕರಣಗಳು ಸಾಕಷ್ಟಿವೆ. ಈ ವಾಸ್ತವವನ್ನು ತಿಳಿದ ನಂತರವೂ ನಾನು ನನ್ನ ಜೀವನವನ್ನು ಮತ್ತು ಅಸಂಪೂರ್ಣ ಕಾರ್ಯಗಳನ್ನು ಹಾಳಾಗಲು ಬಿಡಲು ಸಾಧ್ಯವಿಲ್ಲ ಎಂದು ನಾಯ್ಕ್ ತಿಳಿಸಿದ್ದಾರೆ. ನಾಯ್ಕ್ ವಿರುದ್ಧ 193 ಕೋಟಿ ರೂ. ಹಣವಂಚನೆ ಆರೋಪವನ್ನು ಹೊರಿಸಿರುವ ಜಾರಿ ನಿರ್ದೇಶನಾಲಯ ಸದ್ಯ ಅವರ ವಿರುದ್ಧ ಮುಂಬೈ ನ್ಯಾಯಾಲಯದಿಂದ ಜಾಮೀನುರಹಿತ ವಾರಂಟ್ ಹೊರಡಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾಯ್ಕ್ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಾರಂಟ್ ಜಾರಿಯಾದರೆ ಈಡಿ, ನಾಯ್ಕ್‌ರನ್ನು ಗಡಿಪಾರು ಮಾಡುವಂತೆ ಮಲೇಶ್ಯಾ ಸಹಿತ ಎಲ್ಲ ಸದ್ಯ ರಾಷ್ಟ್ರಗಳಿಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್‌ಪೋಲ್‌ಗೆ ಮನವಿ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News