ಆ್ಯಂಟಿ ರೋಮಿಯೊ ದಳ ಮತ್ತೆ ಸಕ್ರಿಯ: ಆದಿತ್ಯನಾಥ್ ಸೂಚನೆ

Update: 2019-06-11 16:48 GMT

ಲಕ್ನೊ, ಜೂ.11: ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಕ್ರಿಮಿನಲ್‌ಗಳಲ್ಲಿ ಭಯ ಹುಟ್ಟಿಸಲು ವಿಫಲವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಕನಿಷ್ಟ ಐದು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮತ್ತೆ ಆ್ಯಂಟಿ ರೋಮಿಯೊ ದಳ(ಹೆಣ್ಣುಮಕ್ಕಳನ್ನು ಚುಡಾಯಿಸುವ ಪುಂಡರ ಮೇಲೆ ಕಣ್ಣಿಡಲು ರಚಿಸಿರುವ ತಂಡ)ವನ್ನು ಮಾರುಕಟ್ಟೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಸಕ್ರಿಯಗೊಳಿಸುವಂತೆ , ಪೊಲೀಸ್ ಪಡೆಯನ್ನು ಬಲಪಡಿಸುವಂತೆ ಹಾಗೂ ಮಹಿಳೆಯರ ವಿರುದ್ಧ ದುಷ್ಕೃತ್ಯ ನಡೆಸುವವರ ಪಟ್ಟಿಯನ್ನು ಸಿದ್ದಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಗಸ್ತು ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದ ಮುಖ್ಯಮಂತ್ರಿ, ಅತ್ಯಾಚಾರ, ಲೈಂಗಿಕ ಕಿರುಕುಳದ ದೂರು ದಾಖಲಾದ ಒಂದು ದಿನದ ಬಳಿಕವೂ ಆರೋಪಿಗಳ ಬಂಧನವಾಗದ ಬಗ್ಗೆ ಅಸಮಾಧಾನ ಸೂಚಿಸಿದರು. ಕಳೆದ ಫೆಬ್ರವರಿಯಲ್ಲೇ ಆ್ಯಂಟಿ ರೋಮಿಯೊ ದಳವನ್ನು ಸಕ್ರಿಯಗೊಳಿಸಲು ಸೂಚಿಸಿದ್ದರೂ ಚುನಾವಣೆಯ ನೆಪ ಹೇಳಿ ಜಾರಿಗೊಳಿಸದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

   

   ಎಡಿಜಿ, ಐಜಿ, ಡಿಐಜಿ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಕ್ಷೇತ್ರ ಪ್ರವಾಸ ನಡೆಸಬೇಕು ಮತ್ತು ಗಸ್ತು ನಿರ್ವಹಣೆ ಬಿಗಿಗೊಳಿಸಬೇಕು ಎಂದು ತಿಳಿಸಿದ ಅವರು, 100 ಕರೆಸಂಖ್ಯೆಯ ವಾಹನವನ್ನು ವಾಣಿಜ್ಯ ಕೇಂದ್ರಗಳು ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸುವಂತೆ, ವಾಹನಗಳನ್ನು ನಿಯಮಿತವಾಗಿ ತಪಾಸಣೆ ನಡೆಸುವಂತೆ ಹಾಗೂ ದ್ವಿಚಕ್ರ ವಾಹನ ಸವಾರರು ಅಪಾಯಕಾರಿ ಸ್ಟಂಟ್ ನಡೆಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಜುಲೈ 1ರಿಂದ ಶಾಲೆಗಳು ಪುನರಾರಂಭವಾಗಲಿದ್ದು ಮಹಿಳಾ ಕಲ್ಯಾಣ ಇಲಾಖೆಯವರು ಮಹಿಳೆಯರ ಸುರಕ್ಷತೆಗಾಗಿ ಜಾಗೃತಿ ಅಭಿಯಾನವನ್ನು ಶಾಲೆಗಳಲ್ಲಿ ಕೈಗೊಳ್ಳಬೇಕು. 181 ಹೆಲ್ಪ್‌ಲೈನ್ ಸಂಖ್ಯೆ, ಹಾಗೂ ಮಹಿಳಾ ಪವರ್‌ಲೈನ್ ‘1090’ ಅನ್ನು ಇನ್ನಷ್ಟು ಸಶಕ್ತಗೊಳಿಸುವಂತೆ ಆದಿತ್ಯನಾಥ್ ಸೂಚಿಸಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News