ತನ್ನ ತಾಯಿಯ ಮರುವಿವಾಹದ ಕುರಿತು ಯುವಕನ ಫೇಸ್‍ಬುಕ್ ಪೋಸ್ಟ್ ವೈರಲ್

Update: 2019-06-12 09:02 GMT

ತಿರುವನಂತಪುರಂ: "ಇದು ನನ್ನ ತಾಯಿಯ ವಿವಾಹ. ಇಂತಹ ಒಂದು ಪೋಸ್ಟ್ ಬರೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಹಳಷ್ಟು ಯೋಚಿಸಿದ್ದೆ. ಮರುವಿವಾಹ ಈಗಲೂ ಹಲವರ ಪಾಲಿಗೆ ನಿಷಿದ್ಧ'' ಹೀಗೆಂದು ಕೇರಳದ ಕೊಲ್ಲಂ ಎಂಬಲ್ಲಿನ 23 ವರ್ಷದ ಇಂಜಿನಿಯರ್ ಗೋಕುಲ್ ಎಂಬ ಯುವಕ ಮಂಗಳವಾರ ತನ್ನ ಫೇಸ್ ಬುಕ್ ಪೋಸ್ಟ್ ಆರಂಭಿಸಿದ್ದಾನೆ. ಈ ಪೋಸ್ಟ್ ನಲ್ಲಿ ಆತ ತನ್ನ ತಾಯಿ ತನಗಾಗಿ ಮಾಡಿದ ಹಲವು ತ್ಯಾಗಗಳು ಹಾಗೂ ಈಗ ಆಕೆಯ ಜೀವನದ ಹೊಸ ಆರಂಭದ ಬಗ್ಗೆ ಬರೆದಿದ್ದು ಈತನ ಪೋಸ್ಟ್ ಇದೀಗ ವೈರಲ್ ಆಗಿದೆ.

ಗೋಕುಲ್ 10ನೇ ತರಗತಿಯಲ್ಲಿರುವಾಗ ಆತನ ತಾಯಿ, ತನ್ನ ಪತಿಯ ಹಿಂಸೆ ತಾಳಲಾರದೆ ಮನೆಯಿಂದ ಗೋಕುಲ್ ಜತೆಗೂಡಿ ಹೊರನಡೆದಿದ್ದಳು. ಆಗ ಶಾಲಾ ಶಿಕ್ಷಕಿಯಾಗಿದ್ದ ತಾಯಿ ಆ ಕೆಲಸವನ್ನೂ ತೊರೆದಿದ್ದರು.

``ಆಕೆ ತನ್ನ ಜೀವವನ್ನೇ ನನಗಾಗಿ ಮುಡಿಪಾಗಿಸಿದವರು. ಆಕೆ ತನ್ನ ವಿವಾಹದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಒಮ್ಮೆ ಆಕೆ ಹಲ್ಲೆಗೊಳಗಾಗಿ ಆಕೆಯ ಹಣೆಯಲ್ಲಿ ರಕ್ತ ಒಸರುತ್ತಿತ್ತು. ಇಷ್ಟೆಲ್ಲಾ ಏಕೆ ಸಹಿಸಿಕೊಳ್ಳುತ್ತೀರಾ ಎಂದು ಅಮ್ಮನಲ್ಲಿ ಕೇಳಿದಾಗ ಇದನ್ನೆಲ್ಲಾ ನನಗಾಗಿ ಸಹಿಸಿಕೊಳ್ಳುತ್ತಿರುವುದಾಗಿ ಹೇಳಿದ್ದರು'' ಎಂದು ಗೋಕುಲ್ ಬರೆದಿದ್ದಾನೆ.

“ಆ ದಿನ ನನ್ನ ತಾಯಿಯ ಕೈ ಹಿಡಿದು ಆ ಮನೆಯಿಂದ ಹೊರ ನಡೆದಾಗ ಇದು ನಡೆದೇ ತೀರುವಂತೆ ಮಾಡುತ್ತೇನೆಂದು (ಮರು ವಿವಾಹ) ಅಂದುಕೊಂಡಿದ್ದೆ. ತನ್ನ ಯೌವ್ವನದ ಕಾಲದಲ್ಲಿ ಎಲ್ಲವನ್ನೂ ನನಗಾಗಿ ತ್ಯಾಗ ಮಾಡಿದ ನನ್ನ ತಾಯಿಗೆ ಜೀವನದಲ್ಲಿ ಇನ್ನೂ ಹಲವಾರು ಕನಸುಗಳನ್ನು ಈಡೇರಿಸಲು ಹಾಗೂ ಇನ್ನೂ ಎತ್ತರಕ್ಕೆ ಏರಲಿದೆ. ನನಗೆ ಇನ್ನೇನೂ ಹೇಳಲು ಉಳಿದಿಲ್ಲ. ಇದನ್ನು ರಹಸ್ಯವಾಗಿಡುವುದು ನನಗೆ ಇಷ್ಟವಿರಲಿಲ್ಲ'' ಎಂದು ಗೋಕುಲ್ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾನೆ.

ಎಸ್‍ಎಫ್‍ಐ ನಾಯಕನೂ ಆಗಿರುವ ಗೋಕುಲ್, ತಾನು ಉದ್ಯೋಗಕ್ಕೆಂದು ಬೇರೆಡೆ ಹೋದಾಗ ತಾಯಿ ಒಂಟಿಯಾಗಿರುತ್ತಾರೆಂಬ ಭಯ ಹೊಂದಿದ್ದಾಗಿ ಹೇಳುತ್ತಾನೆ. “ಮರುವಿವಾಹವಾಗುವಂತೆ ಆಕೆಗೆ ಹೇಳುತ್ತಿದ್ದೆ. ಆದರೆ ಅವರು ನಿರಾಕರಿಸುತ್ತಿದ್ದರು. ಆದರೆ ಈ ಮದುವೆ ಪ್ರಸ್ತಾಪ ಆಕೆಯ ಸಹೋದ್ಯೋಗಿಗಳ ಮುಖಾಂತರ ಕೆಲ ಸಮಯದ ಹಿಂದೆ ಬಂದಿತ್ತು. ಆರಂಭದಲ್ಲಿ ಒಪ್ಪದೇ ಇದ್ದರೂ ನಂತರ ಒಪ್ಪಿದರು.'' ಎಂದು ಗೋಕುಲ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಟೀಕಾಕಾರರ ಬಗ್ಗೆಯೂ ಗೋಕುಲ್ ಮುಂಚಿತವಾಗಿಯೇ ಕಟು ಮಾತುಗಳನ್ನು ಆಡಿದ್ದಾರೆ- ``ಕಣ್ತುಂಬಾ ಸಂಶಯದಿಂದ, ದ್ವೇಷದಿಂದ ಇಲ್ಲಿ ನೋಡಬೇಡಿ, ನೀವು ಹಾಗೆ ನೋಡಿದರೂ ಅದನ್ನು ಇಲ್ಲಿ ಯಾರೂ ಕೇರ್ ಮಾಡುವುದಿಲ್ಲ'' ಎಂದು ಆತ ಬರೆದಿದ್ದಾನೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News