ಎಸ್‌ಸಿಒ ಶೃಂಗಸಭೆ: ಪಾಕ್ ವಾಯುಮಾರ್ಗ ಬಳಸದಿರಲು ಮೋದಿ ನಿರ್ಧಾರ

Update: 2019-06-12 15:03 GMT

  ಹೊಸದಿಲ್ಲಿ,ಜೂ.12: ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಿರ್ಗಿಝ್‌ಸ್ತಾನದ ರಾಜಧಾನಿ ಬಿಶ್ಕೆಕ್‌ಗೆ ತೆರಳಲು ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಾಯುಮಾರ್ಗವನ್ನು ಬಳಸುವುದಿಲ್ಲ. ಅವರು ಒಮಾನ್ ಹಾಗೂ ಇರಾನ್ ವಾಯುಮಾರ್ಗ ವಾಗಿ ಬಿಶ್ಕೆಕ್‌ಗೆ ತೆರಳಲಿದ್ದಾರೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ತಿಳಿಸಿದೆ.

ತನ್ನ ವಾಯುಕ್ಷೇತ್ರದಲ್ಲಿ ಮೋದಿಯವರ ವಿಮಾನಕ್ಕೆ ಹಾರಾಡುವುದಕ್ಕೆ ‘ತಾತ್ವಿಕ ಆಧಾರ’ದಲ್ಲಿ ಒಪ್ಪಿಗೆ ನೀಡಲು ಪಾಕಿಸ್ತಾನವು ನಿರ್ಧರಿಸಿತ್ತು. ಆದರೆ ಭಾರತವು ಪಾಕ್ ವಾಯುಮಾರ್ಗದಲ್ಲಿ ತೆರಳುತ್ತಿಲ್ಲ. ಅವರು ಒಮಾನ್ ಹಾಗೂ ಇರಾನ್ ಮಾರ್ಗವಾಗಿ ಬಿಶ್ಕೆಕ್‌ಗೆ ತೆರಳಲಿದ್ದಾರೆಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

  ಪಾಕಿಸ್ತಾನ ಹಾಗೂ ಓಮನ್-ಇರಾನ್ ಈ ಎರಡು ವಾಯುಮಾರ್ಗಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಪರಾಮರ್ಶೆ ನಡೆಸಿದ ಬಳಿಕವೇ ಓಮನ್-ಇರಾನ್‌ವಾಯುಮಾರ್ಗದಲ್ಲಿ ಪ್ರಯಾಣಿಸುವ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಯಿತೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

 ಬಾಲಕೋಟ್‌ನಲ್ಲಿ ಜೈಶೆ ಮುಹಮ್ಮದ್ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಫೆಬ್ರವರಿ 26ರಂದು ತನ್ನ ವಾಯುಕ್ಷೇತ್ರದಲ್ಲಿ ಭಾರತೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು. ದಕ್ಷಿಣ ಪಾಕಿಸ್ತಾನದ ಮಾರ್ಗವಾಗಿ ತೆರಳುವ 11 ವಾಯುಮಾರ್ಗಗಳ ಪೈಕಿ ಪಾಕಿಸ್ತಾನವು ಕೇವಲ ಎರಡು ಮಾರ್ಗಗಳಲ್ಲಿ ಮಾತ್ರ ಭಾರತೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಪಾಕಿಸ್ತಾನವು ಜೂನ್ 14ರವರೆಗೆ ಭಾರತದ ಜೊತೆಗಿನ ತನ್ನ ಪೂರ್ವಗಡಿಯಲ್ಲಿನ ವಾಯುಕ್ಷೇತ್ರದ ಮೇಲೆಯೂ ಭಾರತೀಯ ವಿಮಾನಗಳಿಗೆ ಭಾಗಶಃ ನಿಷೇಧ ವಿಧಿಸಿದೆ.

    ಭಾರತ ಸರಕಾರದ ಮನವಿಯ ಮೇರೆಗೆ ಮೋದಿಯವರ ವಿಮಾನವು ತನ್ನ ವಾಯುಕ್ಷೇತ್ರದಲ್ಲಿ ಹಾದುಹೋಗಲು ‘ತಾತ್ವಿಕವಾಗಿ ಅನುಮತಿ’ ನೀಡಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ತಿಳಿಸಿದ್ದರು. ಮೋದಿಯವರ ವಿಮಾನ ಹಾರಾಟಕ್ಕೆ ಅನುಮತಿ ನೀಡುವ ಕುರಿತಾದ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಆ ಬಗ್ಗೆ ಭಾರತ ಸರಕಾರಕ್ಕೆ ಮಾಹಿತಿ ನೀಡಲಾಗುವುದು’’ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದರು.

  ಭಾರತದ ಎಲ್ಲಾ ವಾಯುಮಾರ್ಗಗಳ ಮೇಲಿನ ನಿರ್ಬಂಧಗಳನ್ನು ರದ್ದುಪಡಿಸಿರುವುದಾಗಿ ಭಾರತೀಯ ವಾಯುಪಡೆಯು ಮೇ 31ರಂದು ತಿಳಿಸಿತ್ತು. ಬಾಲಕೋಟ್ ವಾಯುದಾಳಿ ನಡೆಸಿದ ಮಾರನೆ ದಿನವು ಭಾರತವು ತನ್ನ ವಾಯುಮಾರ್ಗದಲ್ಲಿ ಪಾಕ್ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿತ್ತು. ಪಾಕಿಸ್ತಾನವು ತನ್ನ ವಾಯುಕ್ಷೇತ್ರದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ವಿಧಿಸಿರುವ ನಿರ್ಬಂಧಗಳನ್ನು ರದ್ದುಪಡಿಸುವುದಕ್ಕಾಗಿ ಹೊಸದಿಲ್ಲಿಯು ಈ ಕ್ರಮವನ್ನು ಕೈಗೊಂಡಿತ್ತು. ಶಾಂಘಾ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಭಾಗವಹಿಸಲಿದ್ದಾರೆ.

ಕಳೆದ ಮೇ 21ರಂದು ಸುಷ್ಮಾ ಸ್ವರಾಜ್ ಅವರು ಎಸ್‌ಸಿಓ ವಿದೇಶಾಂಗ ಸಚಿವರುಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬಿಶ್ಕೆಕ್‌ಗೆ ತೆರಳುವಾಗಲೂ,ಅವರಿದ್ದ ವಿಮಾನ ತನ್ನ ವಾಯುಮಾರ್ಗದಲ್ಲಿ ಪ್ರಯಾಣಿಸುವುದಕ್ಕೆ ಪಾಕಿಸ್ತಾನ ವಿಶೇಷ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News