ವಿಚಾರಣೆಯಲ್ಲಿನ ಪ್ರಮಾದದಿಂದ ವಿಶಾಲ್ ಜಂಗೋತ್ರ ಖುಲಾಸೆ: ನ್ಯಾಯಾಲಯ

Update: 2019-06-12 16:18 GMT

ಪಠಾಣ್‌ಕೋಟ್, ಜೂ. 12: ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸಾಕ್ಷಾಧಾರದ ಕೊರತೆಯಿಂದ ವಿಶಾಲ್ ಜಂಗೋತ್ರಾನನ್ನು ಖುಲಾಸೆಗೊಳಿಸಿರುವ ಪಠಾಣ್‌ಕೋಟ್‌ನ ವಿಶೇಷ ನ್ಯಾಯಾಲಯ, ವಿಚಾರಣೆಯ ಲೋಪದ ಬಗ್ಗೆ ಬೆಟ್ಟು ಮಾಡಿದೆ.

 ವಿಶಾಲ್ ಜಂಗೋತ್ರ ದೋಷಿ ಸಂಜಿ ರಾಮ್‌ನ ಪುತ್ರ. ಆತನನ್ನು ‘ಸಂದೇಹದ ಲಾಭ’ದಲ್ಲಿ ನ್ಯಾಯಾಲಯ ಬಿಡುಗಡೆ ಮಾಡಿದೆ. ವಿಚಾರಣೆಯ ಸಂದರ್ಭ ಜಂಗೋತ್ರನ ಸಾಕ್ಷವನ್ನು (ತಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ) ತಪ್ಪೆಂದು ದೃಢೀಕರಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ ಹಾಗೂ ಆತನ ವಿರುದ್ಧದ ಈ ಅತ್ಯುತ್ತಮ ಸಾಕ್ಷವನ್ನು ತಡೆ ಹಿಡಿದಿರುವುದಕ್ಕೆ ಜಮ್ಮು ಕ್ರೈಮ್ ಬ್ರಾಂಚ್‌ನ್ನು ತರಾಟೆಗೆ ತೆಗೆದುಕೊಂಡಿದೆ.

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 7 ಮಂದಿ ಆರೋಪಿಗಳಲ್ಲಿ 6 ಮಂದಿಯನ್ನು ದೋಷಿ ಎಂದು ಪರಿಗಣಿಸಿತ್ತು. ಮೂವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇತರ ಮೂವರಿಗೆ ಸಾಕ್ಷ ನಾಶಗೊಳಿಸಿರುವುದಕ್ಕೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತ್ತು. ವಿಶಾಲ್ ಜಂಗೋತ್ರನ ಸಾಕ್ಷ ತಪ್ಪು ಅಥವಾ ನಕಲಿ ಅಥವಾ ತಿರುಚಿರುವುದು ಎಂದು ದೃಢಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಜಂಗೋತ್ರನ ಸಾಕ್ಷವನ್ನು ತಪ್ಪೆಂದು ದೃಢಪಡಿಸಬೇಕಿತ್ತು. ಇದು ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ನ ಮಾಡಿದ ಅತಿ ದೊಡ್ಡ ಲೋಪ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

2018 ಜನವರಿಯಲ್ಲಿ ಘಟನೆ ನಡೆಯುವ ಸಂದರ್ಭ ಜಂಗೋತ್ರ ಕಥುವಾದಲ್ಲಿ ಇದ್ದ ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಉತ್ತರಪ್ರದೇಶದಲ್ಲಿ ನಡೆದ ಪರೀಕ್ಷೆಯಲ್ಲಿ ಜಂಗೋತ್ರನ ಬದಲಿಗೆ ಇತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅದು ತಿಳಿಸಿತ್ತು. ಅದು ಉತ್ತರ ಪತ್ರಿಕೆಯನ್ನು ಕೂಡ ಸಲ್ಲಿಸಿತ್ತು. ಆದರೆ, ಈ ಉತ್ತರಪತ್ರಿಕೆಯನ್ನು ಬೇರೆಯವರು ಬರೆದಿರುವ ಸಾಧ್ಯತೆ ಇಲ್ಲ ಎಂದು ಕೈಬರಹ ತಜ್ಞರು ಹೇಳಿದ್ದಾರೆ.

ಪರೀಕ್ಷೆಗೆ ವಿಶಾಲ್ ಹಾಜರಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಆತನ ಬದಲಿಗೆ ಇತರರು ಪರೀಕ್ಷೆ ಬರೆದಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ಒಪ್ಪಿಕೊಳ್ಳಲು ಕೂಡ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆಯಲ್ಲಿ ಇಂತಹ ಕೆಲವು ಮೂಲಭೂತ ತಪ್ಪುಗಳನ್ನು ನ್ಯಾಯಾಲಯ ಗುರುತಿಸಿದೆ. ಜಂಗೋತ್ರನ ಖುಲಾಸೆ ವಿರುದ್ಧ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News