‘ವಾಯು’ ಚಂಡಮಾರುತ: ಗುಜರಾತ್‌ನಲ್ಲಿ ಕಟ್ಟೆಚ್ಚರ

Update: 2019-06-12 16:24 GMT

ಅಹ್ಮದಾಬಾದ್, ಜೂ. 12: ‘ವಾಯು’ ಚಂಡಮಾರುತ ಗುಜರಾತ್ ಕರಾವಳಿ ಕಡೆ ಸಾಗುತ್ತಿದ್ದು, ರಾಜ್ಯ ಸರಕಾರ ಸೌರಾಷ್ಟ್ರ, ಕಚ್ಛ್ ವಲಯದಲ್ಲಿರುವ ತಗ್ಗು ಪ್ರದೇಶದಿಂದ ಸುಮಾರು 3 ಲಕ್ಷ ಜನರನ್ನು ಸಾಮೂಹಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಂಡಿದೆ.

ಗಂಟೆಗೆ 145ರಿಂದ 155 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವ ಚಂಡಮಾರುತ ಜೂನ್ 13ರಂದು ಗಂಟೆಗೆ 170 ಕಿ.ಮೀ. ವೇಗ ಪಡೆದುಕೊಂಡು ವೆರವಾಲ್ ಸಮೀಪದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದಿಂದ ಕಚ್ಛ್, ಮೊರ್ಬಿ, ಜಾಮ್‌ನಗರ್, ಜುನಾಗಢ್, ದೇವ್‌ಭೂಮಿ-ದ್ವಾರಕ, ಪೋರ್ಬಂದರ್, ರಾಜ್‌ಕೋಟ್, ಅಮ್ರೇಲಿ, ಭಾವನಗರ್ ಹಾಗೂ ಗಿರ್-ಸೋಮನಾಥ್ ಜಿಲ್ಲೆಗಳಲ್ಲಿ ಹಾನಿ ಉಂಟಾಗಲಿದೆ ಎಂದು ರಾಜ್ಯ ಸರಕಾರ ಹೇಳಿದೆ.

ಸ್ಥಳಾಂತರ ಪ್ರಕ್ರಿಯೆಗೆ ಸಹಕರಿಸುವಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ಮಂಗಳವಾರ ಹೇಳಿದ್ದರು. ತಗ್ಗು ಪ್ರದೇಶಗಳು ಹಾಗೂ ಕರಾವಳಿ ತೀರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದರು. ಎನ್‌ಡಿಆರ್‌ಎಫ್‌ನ ಸಮಾರು 36 ಕಂಪೆನಿಗಳು ಈಗಾಗಲೇ ಜಿಲ್ಲಾಡಳಿತಕ್ಕೆ ಸ್ಥಳಾಂತರ ಪ್ರಕ್ರಿಯೆಯಲ್ಲಿ ನೆರವು ನೀಡುತ್ತಿದೆ. ತಟ ರಕ್ಷಣಾ ಪಡೆ, ಸೇನಾ ಪಡೆ, ನೌಕಾ ಪಡೆ, ವಾಯು ಪಡೆ ಹಾಗೂ ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ.

ಶಾಲೆ, ಕಾಲೇಜುಗಳಿಗೆ ನಾಳೆ ರಜೆ

ಕರಾವಳಿ ಜಿಲ್ಲೆಗಳ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ಜೂನ್ 13ರ ವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News