ಬಿಹಾರದಲ್ಲಿ ಮೆದುಳಿನ ಉರಿಯೂತದಿಂದ 37 ಮಕ್ಕಳ ಸಾವು

Update: 2019-06-13 13:31 GMT
ಸಾಂದರ್ಭಿಕ ಚಿತ್ರ

ಪಾಟ್ನ, ಜೂ.13: ಬಿಹಾರದ ಮುಝಫರ್‌ಪುರದಲ್ಲಿ ಬುಧವಾರ ಮತ್ತೆ ಎರಡು ಮಕ್ಕಳು ಅಸೌಖ್ಯದಿಂದ ಸಾವನ್ನಪ್ಪಿದ್ದು ಇದರೊಂದಿಗೆ ಶಂಕಿತ ಮೆದುಳಿನ ಉರಿಯೂತದಿಂದ ರಾಜ್ಯದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 37ಕ್ಕೇರಿದೆ. ಆದರೆ , 37 ಮಕ್ಕಳ ಸಾವಿಗೆ ಹೈಪೊಗ್ಲೈಸಿಮಾ (ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು) ಕಾರಣ ಎಂದು ರಾಜ್ಯ ಸರಕಾರದ ಉನ್ನತ ಅಧಿಕಾರಿ ಹೇಳಿದ್ದಾರೆ.

ಈ ಮಧ್ಯೆ ಹೇಳಿಕೆ ನೀಡಿರುವ ಬಿಹಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಮುಝಾಫರ್‌ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಮಕ್ಕಳು ತೀವ್ರ ಮೆದುಳು ಉರಿಯೂತದ ಲಕ್ಷಣ(ಎಇಎಸ್)ದಿಂದ ಸಾವನ್ನಪ್ಪಿದ್ದು ಇದರೊಂದಿಗೆ ಮೃತಪಟ್ಟ ಮಕ್ಕಳ ಸಂಖ್ಯೆ 37ಕ್ಕೇರಿದೆ ಎಂದಿದ್ದಾರೆ. ಅಲ್ಲದೆ ಮುಝಫರ್‌ಪುರದಲ್ಲಿರುವ ಕೇಜ್ರಿವಾಲ್ ಮೆಟರ್ನಿಟಿ ಕ್ಲಿನಿಕ್‌ನಲ್ಲಿ ಹಲವು ಮಕ್ಕಳು ಎಇಎಸ್ ಪೀಡಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಹಾರದ ವೈಶಾಲಿ, ಸಿತಾಮರ್ಹಿ, ಶಿಯೊಹರ್, ಪೂರ್ವ ಚಂಪಾರಣ್, ಪಾಟ್ನ, ನಳಂದ, ಮುಝಪ್ಪರ್‌ಪುರ, ಜೆಹನಾಬಾದ್, ಗಯ, ಭೋಜ್‌ಪುರ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಇದುವರೆಗೆ 143 ಎಇಎಸ್ ಪ್ರಕರಣ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದ ರೋಗ ನಿಯಂತ್ರಣ ವಿಭಾಗದ ಪ್ರಧಾನ ನಿರ್ದೇಶಕ ಆರ್‌ಡಿ ರಂಜನ್ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಮುಝಫರ್‌ಪುರಕ್ಕೆ ಭೇಟಿ ನೀಡಿದ್ದಾರೆ.

ಜೂನ್ 10ರವರೆಗೆ 34 ಸಾವಿನ ಪ್ರಕರಣ ದಾಖಲಾಗಿದ್ದು, ತೀವ್ರ ಮೆದುಳು ಜ್ವರದ 109 ಪ್ರಕರಣ ವರದಿಯಗಿದೆ. ಆದರೆ ಇದುವರೆಗೆ ಎಇಎಸ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ. ಮಕ್ಕಳ ಸಾವಿಗೆ ತೀವ್ರ ಉಷ್ಣತೆ ಮತ್ತು ಆರ್ದ್ರತೆಯಿಂದ ಉಂಟಾಗುವ ಹೈಪೊಗ್ಲೈಸಿಮಿಯ ಕಾರಣ (ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು) ಎಂದವರು ಹೇಳಿದ್ದಾರೆ. ಹಿರಿಯ ಶಿಶು ತಜ್ಞ ಡಾ ಅರುಣ್ ಸಿಂಗ್ ನೇತೃತ್ವದ 7 ಸದಸ್ಯರ ಕೇಂದ್ರ ತಂಡ ಬುಧವಾರ ಮುಝಫರ್‌ಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ವರದಿ ಸಲ್ಲಿಸುವಂತೆ ಕೇಂದ್ರ ತಂಡಕ್ಕೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News