ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಜನಾಥ್ ಸಿಂಗ್ ಸೂರ್ಯ ನಿಧನ
ಲಕ್ನೋ,ಜೂ.13: ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಪತ್ರಕರ್ತ ರಾಜನಾಥ್ ಸಿಂಗ್ ಸೂರ್ಯ ಗುರುವಾರ ಬೆಳಿಗ್ಗೆ ಲಕ್ನೋದ ಗೋಮತಿನಗರದ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. 82ರ ಹರೆಯದ ಸೂರ್ಯ ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅವರು ಕುಟುಂಬ ವರ್ಗ ಮಾಧ್ಯಮಗಳಿಗೆ ತಿಳಿಸಿದೆ.
ಸೂರ್ಯ ಅವರ ಮೃತದೇಹವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ದಾನ ಮಾಡುವುದಾಗಿ ಅವರ ಪುತ್ರ ಸುನೀಲ್ ಸಿಂಗ್ ತಿಳಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ್ ಜಿಲ್ಲೆಯಲ್ಲಿ 1937ರ ಮೇ 8ರಂದು ಜನಿಸಿದ ಸೂರ್ಯ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. 1996ರ ನವೆಂಬರ್‌ನಲ್ಲಿ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದ ಸೂರ್ಯ ಅವರು 2002ರ ನವೆಂಬರ್‌ನಲ್ಲಿ ನಿವೃತ್ತಿ ಹೊಂದಿದ್ದರು. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆ ನಂಟು ಬೆಳೆಸಿಕೊಂಡಿದ್ದ ಸೂರ್ಯ 1960ರಲ್ಲಿ ಗೋರಖ್‌ಪುರ ವಿಶ್ವವಿದ್ಯಾನಿಲದಿಂದ ಎಂ.ಎ ಪೂರೈಸಿದರು.
ಲಕ್ನೋದ ಬಹುಭಾಷಾ ಸುದ್ದಿ ಸಂಸ್ಥೆ ಹಿಂದುಸ್ಥಾನ್ ಸಮಾಚಾರ್ ಮೂಲಕ ತನ್ನ ಪತ್ರಕರ್ತ ಜೀವನ ಆರಂಭಿಸಿದ ಸೂರ್ಯ ನಂತರ ಆಜ್ ದಿನಪತ್ರಿಕೆಯ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 1988ರಲ್ಲಿ ದೈನಿಕ್ ಭಾಸ್ಕರ್ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಸೇರಿಕೊಂಡ ಅವರು ಸ್ವತಂತ್ರ ಭಾರತ್ ದಿನಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.