×
Ad

ಕೆಲಸಕ್ಕೆ ಮರಳಲು ಕಿರಿಯ ವೈದ್ಯರಿಗೆ ಗಡುವು ವಿಧಿಸಿದ ಮಮತಾ ಬ್ಯಾನರ್ಜಿ; ನಿರಾಕರಿಸಿದ ಪ್ರತಿಭಟನಾಕಾರರು

Update: 2019-06-13 19:23 IST

ಕೋಲ್ಕತ್ತಾ, ಜೂ.13: ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಕೆಲಸಕ್ಕೆ ಮರಳಲು ಮಧ್ಯಾಹ್ನ ಎರಡು ಗಂಟೆಯ ಗಡುವು ವಿಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶವನ್ನು ಪಾಲಿಸಲು ನಿರಾಕರಿಸಿರುವ ಪ್ರತಿಭಟನಾಕಾರರು ಸೂಕ್ತ ರಕ್ಷಣೆಯನ್ನು ಒದಗಿಸದೆ ಕೆಲಸಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಮೊದಲಿಗೆ ಕಿರಿಯ ವೈದ್ಯರಿಗೆ ನಾಲ್ಕು ಗಂಟೆಗಳ ಗಡುವು ವಿಧಿಸಿದ ಬ್ಯಾನರ್ಜಿ ನಂತರ ಅದನ್ನು 2 ಗಂಟೆ ವಿಸ್ತರಿಸಿದ್ದಾರೆ.

ಈ ಮಧ್ಯೆ ಪ್ರತಿಭಟನಾಕಾರರು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ವೈದ್ಯಕೀಯ ಸೇವೆ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಗುರುವಾರ ಸರಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ ಬ್ಯಾನರ್ಜಿ, ಆಸ್ಪತ್ರೆಯ ಆವರಣದಲ್ಲಿ ನಿಲ್ಲಲು ರೋಗಿಗಳನ್ನು ಹೊರತುಪಡಿಸಿ ಇತರ ಯಾರಿಗೂ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ.

 ಕೆಲಸಕ್ಕೆ ಮರಳದ ವೈದ್ಯರು ವಸತಿ ನಿಲಯವನ್ನು ತೊರೆಯಬೇಕು ಎಂದು ಆಗ್ರಹಿಸಿರುವ ಬ್ಯಾನರ್ಜಿ, ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವರ್ತನೆಯನ್ನು ಖಂಡಿಸುತ್ತಾ, ಪೊಲೀಸರು ಕರ್ತವ್ಯದ ವೇಳೆ ಸಾವನ್ನಪ್ಪುತ್ತಾರೆ. ಹಾಗೆಂದು ಅವರು ಪ್ರತಿಭಟನೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರತಿಭಟನೆ ಸಿಪಿಐ(ಎಂ) ಮತ್ತು ಬಿಜೆಪಿಯ ಪಿತೂರಿಯಾಗಿದೆ. ಇಲ್ಲಿ ತೊಂದರೆ ಸೃಷ್ಟಿಸುವ ಉದ್ದೇಶದಿಂದಲೇ ಹೊರಗಿನವರು ನಮ್ಮ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಪ್ರವೇಶಿಸಿದ್ದಾರೆ. ಬಿಜೆಪಿ ಈ ಪ್ರತಿಭಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News