ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪರ ಭಾರತ ಮತ: ಮೋದಿಗೆ ಧನ್ಯವಾದ ಸಲ್ಲಿಸಿದ ನೆತನ್ಯಾಹು

Update: 2019-06-13 15:24 GMT

ಜೆರುಸಲೇಮ್, ಜೂ. 13: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಮಂಡಿಸಿದ ನಿರ್ಣಯವೊಂದರ ಪರವಾಗಿ ಮತ ಹಾಕಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧನ್ಯವಾದ ಸಲ್ಲಿಸಿದ್ದಾರೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಫೆಲೆಸ್ತೀನ್‌ನ ಸಂಸ್ಥೆಯೊಂದಕ್ಕೆ ‘ಸಲಹಾಗಾರ’ ಸ್ಥಾನಮಾನ ನೀಡುವುದನ್ನು ಇಸ್ರೇಲ್‌ನ ನಿರ್ಣಯವು ವಿರೋಧಿಸುತ್ತದೆ.

ಫೆಲೆಸ್ತೀನ್‌ನ ಸರಕಾರೇತರ ಸಂಘಟನೆ ‘ಶಾಹಿದ್’ಗೆ ವೀಕ್ಷಕ ಸ್ಥಾನಮಾನವನ್ನು ನಿರಾಕರಿಸುವ ಇಸ್ರೇಲ್‌ನ ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಭಾರತ ಮಂಗಳವಾರ ಮತ ಹಾಕಿರುವುದನ್ನು ಸ್ಮರಿಸಬಹುದಾಗಿದೆ.

ಹಮಾಸ್ ಜೊತೆಗಿನ ತನ್ನ ನಂಟನ್ನು ಶಾಹಿದ್ ಬಹಿರಂಗಪಡಿಸಿಲ್ಲ ಎಂಬುದಾಗಿ ಇಸ್ರೇಲ್ ಆರೋಪಿಸಿದೆ.

‘‘ಥ್ಯಾಂಕ್ ಯೂ ನರೇಂದ್ರ ಮೋದಿ, ಥ್ಯಾಂಕ್ ಯೂ ಇಂಡಿಯಾ... ನಿಮ್ಮ ಬೆಂಬಲಕ್ಕಾಗಿ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪರವಾಗಿ ನಿಂತಿರುವುದಕ್ಕಾಗಿ’’ ಎಂಬುದಾಗಿ ನೆತನ್ಯಾಹು ಬುಧವಾರ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ, ಇಸ್ರೇಲ್ ಪರ ಎಂಬುದಾಗಿ ಭಾವಿಸಲಾದ ನಿರ್ಣಯವೊಂದರ ಪರವಾಗಿ ಭಾರತ ಮತ ಹಾಕಿರುವುದು ಇದೇ ಮೊದಲ ಬಾರಿಯಾಗಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ಮತದಾನದಲ್ಲಿ ಅಮೆರಿಕ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಬ್ರಿಟನ್, ದಕ್ಷಿಣ ಕೊರಿಯ ಮತ್ತು ಕೆನಡ ದೇಶಗಳು ಇಸ್ರೇಲ್ ಪರವಾಗಿ ಮತ ಹಾಕಿದರೆ, ಚೀನಾ ರಶ್ಯ, ಸೌದಿ ಅರೇಬಿಯ, ಪಾಕಿಸ್ತಾನ ಹಾಗೂ ಇತರ ದೇಶಗಳು ಅದರ ವಿರುದ್ಧವಾಗಿ ಮತ ಚಲಾಯಿಸಿದವು.

ಅದೇ ವೇಳೆ, ವೀಕ್ಷಕ ಸ್ಥಾನಮಾನ ಪಡೆಯುವುದಕ್ಕಾಗಿ ಶಾಹಿದ್ ಮಂಡಿಸಿದ ಪ್ರಸ್ತಾಪವನ್ನು 28-14ರಿಂದ ತಿರಸ್ಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News