ಹಾಂಕಾಂಗ್‌ನಲ್ಲಿ ನಡೆಯುತ್ತಿರುವುದು ಶಾಂತಿಯುತ ರ್ಯಾಲಿಯಲ್ಲ, ಗಲಭೆ: ಚೀನಾ

Update: 2019-06-13 16:00 GMT

 ಬೀಜಿಂಗ್, ಜೂ. 13: ಶಂಕಿತರನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ಕಲ್ಪಿಸುವ ಹಾಂಕಾಂಗ್‌ನ ಮಸೂದೆಯನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳನ್ನು ಚೀನಾ ಗುರುವಾರ ‘ಗಲಭೆ’ ಎಂಬುದಾಗಿ ಬಣ್ಣಿಸಿದೆ ಹಾಗೂ ಈ ಪ್ರತಿಭಟನೆಗೆ ಹಾಂಕಾಂಗ್ ಸರಕಾರ ವ್ಯಕ್ತಪಡಿಸಿರುವ ಪ್ರತಿಕ್ರಿಯೆಯನ್ನು ತಾನು ಬೆಂಬಲಿಸುವುದಾಗಿ ಅದು ಹೇಳಿದೆ.

ಹಾಂಕಾಂಗ್ ತರಲು ಉದ್ದೇಶಿಸಿರುವ ಕಾನೂನು ಜನರನ್ನು ಚೀನಾದ ರಾಜಕೀಯ ಪ್ರೇರಿತ ನ್ಯಾಯ ವ್ಯವಸ್ಥೆಗೆ ಗುರಿಪಡಿಸುತ್ತದೆ ಎಂಬುದಾಗಿ ಪ್ರತಿಭಟನಕಾರರು ಹೇಳುತ್ತಾರೆ.

ಬುಧವಾರ ಹಾಂಕಾಂಗ್ ಸಂಸತ್ತಿನಲ್ಲಿ ಈ ನಿರ್ಣಯವು ಚರ್ಚೆಗೆ ಬಂದಾಗ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಸಂಸತ್ತಿನ ಮುಂದೆ ನೆರೆದರು ಹಾಗೂ ನಗರದ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು. ಎಲ್ಲ ರಸ್ತೆಗಳು ಜನರಿಂದ ತುಂಬಿದ ಹಿನ್ನೆಲೆಯಲ್ಲಿ, ಬುಧವಾರ ನಗರ ಸ್ತಬ್ಧಗೊಂಡಿತ್ತು.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದರು.

ಹಾಂಕಾಂಗ್ ಪೊಲೀಸರು ನಿರಾಯುಧ ಜನರನ್ನು ಹೊಡೆಯುವುದನ್ನು ತೋರಿಸುವ ಚಿತ್ರಗಳು ಹರಿದಾಡುತ್ತಿದ್ದು, ಪೊಲೀಸರು ಪ್ರತಿಭಟನಕಾರರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

‘‘ಹಾಂಕಾಂಗ್‌ನ ಪರಿಸ್ಥಿತಿ ಬಗ್ಗೆ ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಹಾಗೂ ಇತರ ಅಧಿಕಾರಿಗಳು ಈಗಾಗಲೇ ವಿವರಿಸಿದ್ದಾರೆ. ಅಡ್ಮಿರಾಲ್ಟಿ ಪ್ರದೇಶದಲ್ಲಿ ನಡೆದಿರುವುದು ಶಾಂತಿಯುತ ರ್ಯಾಲಿಯಲ್ಲ, ಗುಂಪೊಂದು ಏರ್ಪಡಿಸಿದ ಗಲಭೆ ಎಂಬುದಾಗಿ ಅವರು ಹೇಳಿದ್ದಾರೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದರು.

‘‘ಹಾಂಕಾಂಗ್‌ನ ಸಮೃದ್ಧಿ ಮತ್ತು ಸ್ಥಿರತೆಯನ್ನು ಕಡೆಗಣಿಸುವ ಯಾವುದೇ ಕೃತ್ಯವು ಹಾಂಕಾಂಗ್‌ನ ಮುಖ್ಯವಾಹಿನಿಯ ಜನಾಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ನನಗನಿಸುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News