ಖಾಸಗಿ ವಲಯದಿಂದ ಅಧಿಕಾರಿಗಳ ನಿಯೋಜನೆ: ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ತರಾಟೆ

Update: 2019-06-14 15:26 GMT

ಹೊಸದಿಲ್ಲಿ, ಜೂ. 14: ಮೀಸಲಾತಿ ಇಲ್ಲದೆ ಖಾಸಗಿ ಕ್ಷೇತ್ರದಿಂದ ಜಂಟಿ ಕಾರ್ಯದರ್ಶಿಯನ್ನು ನಿಯೋಜಿಸುವ ವರದಿ ಕುರಿತಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಕಾಂಗ್ರೆಸ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಇದು ಹೊಸ ಪ್ರತಿಭೆಗಳನ್ನು ನಿಯೋಜಿಸುವ ನೆಪದಲ್ಲಿ ಸಂವಿಧಾನವನ್ನು ಬದಿಗೊತ್ತುವ ಪ್ರಯತ್ನವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ವರ್ಷ ಎಪ್ರಿಲ್‌ನಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗೆ ಖಾಸಗಿ ವಲಯದಿಂದ ಪ್ರತಿಭೆಗಳನ್ನು ನಿಯೋಜಿಸುವ ಸಂದರ್ಭ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನೀಡದ ವಿಧಾನವನ್ನು ತರಬೇತಿ ಇಲಾಖೆ ಅನುಸರಿಸಿದೆ ಎಂಬ ಪತ್ರಿಕಾ ವರದಿಯನ್ನು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಉಲ್ಲೇಖಿಸಿದ್ದಾರೆ. ಶೇ. 40 ಜಂಟಿ ಕಾರ್ಯದರ್ಶಿಗಳನ್ನು ನಿಯೋಜಿಸುವ ಸಂದರ್ಭ ಎಸ್‌ಸಿ, ಎಸ್‌ಟಿ, ಬಿಸಿ ಹಾಗೂ ಒಬಿಸಿ ಮೀಸಲಾತಿಯನ್ನು ಗಾಳಿಗೆ ತೂರಲಾಗಿದೆ. ಆಡಳಿತಕ್ಕೆ ಹೊಸ ಪ್ರತಿಭೆಗಳನ್ನು ನಿಯೋಜಿಸುವುದು ಸರಿಯಾದುದು. ಆದರೆ, ಇದು ಸಂವಿಧಾನವನ್ನು ಬದಿಗೆ ಸರಿಸುವ ಪ್ರಯತ್ನ ಅಲ್ಲವೇ ? ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆರಂಭದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಎಸ್‌ಸಿ, ಎಸ್‌ಟಿ, ಬಿಸಿ ಹಾಗೂ ಒಬಿಸಿ ಮೀಸಲಾತಿಯನ್ನು ಅಂತ್ಯಗೊಳಿಸಲು ಇದೇ ರೀತಿಯ 'ಏಕ ಶ್ರೇಣಿಯ ಹುದ್ದೆ' ಬಗ್ಗೆ ವಾದಿಸಲಾಗಿತ್ತು. ಸಾರ್ವತ್ರಿಕ ಚುನಾವಣೆ ಹಾಗೂ ರಾಷ್ಟ್ರ ವ್ಯಾಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಅದನ್ನು ಹಿಂದೆ ತೆಗೆಯಲಾಗಿತ್ತು. ಈ ಮಾನದಂಡ ತಪ್ಪು ಎಂದಾದರೆ, ಜಂಟಿ ಕಾರ್ಯದರ್ಶಿಗಳನ್ನು ನಿಯೋಜಿಸುವುದು ಸರಿಯಾಗಲು ಹೇಗೆ ಸಾಧ್ಯ? ಎಂದು ಸುರ್ಜೇವಾಲ ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News