ಪೊಲೀಸರ ವ್ಯಥೆಯನ್ನು ನಗಿಸುತ್ತಾ ನಿರೂಪಿಸುವ ಥ್ರಿಲ್ಲರ್ ‘ಉಂಡ’

Update: 2019-06-16 12:36 GMT

ಪೊಲೀಸರ ಕಥೆಯನ್ನು ಹೊಂದಿದ ಚಿತ್ರ, ಮಮ್ಮುಟ್ಟಿ ಅದರ ನಾಯಕ ಎಂದಾಕ್ಷಣ ನಾವು ಒಂದು ಪೂರ್ವ ನಿರ್ಧಾರವನ್ನು ತಳೆದುಬಿಡುತ್ತೇವೆ. ಅಬ್ಬರದ ಡೈಲಾಗ್‌ಗಳು ಮತ್ತು ಮಮ್ಮುಟ್ಟಿಯ ಸಾಹಸಗಳಿಗೆ ಸಿದ್ಧರಾಗಿಯೇ ಚಿತ್ರಮಂದಿರ ಪ್ರವೇಶಿಸುತ್ತೇವೆ. ಆದರೆ ಚಿತ್ರ ಆರಂಭವಾಗುತ್ತಿದ್ದಂತೆಯೇ ನಮ್ಮೆಲ್ಲ ಊಹೆಗಳು ತಲೆಕೆಳಗಾಗಿ ಬಿಡುತ್ತವೆ. ಖಾಲಿದ್ ರೆಹಮಾನ್ ನಿರ್ದೇಶನದ ಮಲಯಾಳಂ ಚಿತ್ರ ‘ಉಂಡ’ ನಾವು ಹಿಂದೆಂದೂ ಕಂಡರಿಯದ ಪೊಲೀಸರ ಕಥೆಯೊಂದನ್ನು ಹೇಳುತ್ತದೆ. ಖಾಕಿ ಧಿರಿಸಿನೊಳಗಿರುವ ಪೊಲೀಸರ ವಿಷಾದದ ಬದುಕನ್ನು ಈ ಚಿತ್ರ ಅತ್ಯಂತ ಲವಲವಿಕೆಯಿಂದ ನಿರೂಪಿಸುತ್ತದೆ.

ನಗು ನಗುತ್ತಾ ಚಿತ್ರವನ್ನು ನೋಡುತ್ತಿದ್ದರೂ ಆಳದಲ್ಲಿ ಪೊಲೀಸರಿಗಾಗಿ ಮಿಡಿಯುವುದು ಪ್ರೇಕ್ಷಕರಿಗೆ ಅನಿವಾರ್ಯವಾಗುತ್ತದೆ. ಬಿಗಿ ಚಿತ್ರಕತೆಯ ಮೂಲಕ ಗಂಭೀರ ವಿಷಯವೊಂದನ್ನು ಲವಲವಿಕೆಯ ಥ್ರಿಲ್ಲರ್ ಕಥೆಯಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಯಾವುದೇ ಮೆಲೋಡ್ರಾಮಗಳಿಲ್ಲದ, ಪೊಲೀಸರ ಬದುಕಿನ ವಾಸ್ತವವನ್ನು ಚಿತ್ರ ಹೇಳುತ್ತದೆ. ಖಾಕಿಯ ಕ್ರೌರ್ಯಗಳನ್ನಷ್ಟೇ ನೋಡಿ ಗೊತ್ತಿರುವ ಪ್ರೇಕ್ಷಕರು ಖಾಕಿಯೊಳಗಿರುವ ಅಮಾಯಕ ಪೊಲೀಸ್ ಮನಸ್ಸುಗಳಿಗೆ ಮೊದಲ ಬಾರಿಗೆ ಮುಖಾಮುಖಿಯಾಗುತ್ತಾರೆ. ಪೊಲೀಸ್ ಧಿರಿಸಿನಲ್ಲಿರುವ ಮಮ್ಮುಟ್ಟಿಯವರದೂ ಇಲ್ಲಿ ವಿಭಿನ್ನವಾದ, ವಾಸ್ತವಕ್ಕೆ ಹತ್ತಿರವಿರುವ ಅಧಿಕಾರಿಯ ಪಾತ್ರ. ಎಸ್‌ಐ ಮಣಿಕಂಠನ್(ಮಮ್ಮುಟ್ಟಿ) ಅವರ ನೇತೃತ್ವದ ಪೊಲೀಸ್ ತಂಡವೊಂದು ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಕೆಲವು ದಿನಗಳ ಕಾಲ ನಕ್ಸಲ್‌ಪೀಡಿತ ಪ್ರದೇಶಕ್ಕೆ ತೆರಳುತ್ತದೆ. ಹಿಂದಿ ಭಾಷಿಗರ ನೆಲದಲ್ಲಿ ಈ ತಂಡ ಉಭಯ ರಾಜ್ಯಗಳ ಸರಕಾರಗಳ ನಡುವಿನ ಸಂವಹನ ಕೊರತೆಯಿಂದ ಎದುರಿಸುವ ಸವಾಲು, ಕೋವಿಗೆ ಬೇಕಾದ ಮದ್ದುಗುಂಡುಗಳ ಕೊರತೆಯನ್ನು ಇಟ್ಟುಕೊಂಡು ನಕ್ಸಲರನ್ನು ಎದುರಿಸುವ ವಸ್ತುವನ್ನು ಈ ಕಥೆ ಹೊಂದಿದೆ. ಕೇರಳ ಸರಕಾರ ಕಳುಹಿಸುವ ಮದ್ದು ಗುಂಡುಗಳ ನಿರೀಕ್ಷೆಯೊಂದಿಗೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸುವ, ಈ ತುಕಡಿ ಅದರಲ್ಲಿ ಯಶಸ್ವಿಯಾಗುತ್ತದೆಯೋ ಇಲ್ಲವೋ? ಅವರಿಗೆ ಮದ್ದು ಗುಂಡು ತಲುಪುತ್ತದೆಯೋ, ಸಮಸ್ಯೆಯನ್ನು ಎದುರಿಸುವಲ್ಲಿ ಅವರು ಸಫಲರಾಗುತ್ತಾರೆಯೋ ಎನ್ನುವುದನ್ನು ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ.

ಕಾಡಿನ ಮಧ್ಯೆ ಯಾರು ನಕ್ಸಲರು, ಯಾರು ಗೂಂಡಾಗಳು, ಯಾರು ನಾಗರಿಕರು ಎನ್ನುವ ಅರಿವಿಲ್ಲದೆ, ಆ ನೆಲದ ಭಾಷೆಯೂ ತಿಳಿಯದೆ, ಕೈಯಲ್ಲಿ ಸಮರ್ಥ ಆಯುಧಗಳೂ ಇಲ್ಲದೆ ಕರ್ತವ್ಯ ನಿರ್ವಹಿಸುವ ಪೊಲೀಸರು, ಅವರ ಒಳಗಿನ ಕಥೆ, ವ್ಯಥೆಯನ್ನು ಅತ್ಯಂತ ತಿಳಿ ಹಾಸ್ಯದಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ನಕ್ಸಲ್ ಸಮಸ್ಯೆಯ ಸೂಕ್ಷ್ಮಗಳನ್ನು ಚಿತ್ರ ಪರಿಣಾಮಕಾರಿಯಾಗಿ ಸಣ್ಣ ಸಣ್ಣ ದೃಶ್ಯಗಳ ಮೂಲಕ ತೆರೆದಿಡುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ತಳಸ್ತರದ ಪೊಲೀಸ್ ಸಿಬ್ಬಂದಿ ನಡುವಿನ ಕಂದಕಗಳನ್ನು ಈ ಚಿತ್ರ ವ್ಯಂಗ್ಯ ಮಾಡುತ್ತದೆ. ಉಭಯ ರಾಜ್ಯಗಳ ಸರಕಾರ ಮತ್ತು ಅಧಿಕಾರಿಗಳ ಪ್ರತಿಷ್ಠೆಗೆ ಮತ್ತು ವೈಫಲ್ಯಗಳಿಗೆ ಹೇಗೆ ತಳಸ್ತರದ ಸಿಬ್ಬಂದಿ ಬಲಿಯಾಗಬೇಕಾಗುತ್ತದೆ ಎನ್ನುವುದನ್ನು ಚಿತ್ರಕತೆ ಕೇಂದ್ರವಾಗಿರಿಸಿದೆ.

ನಕ್ಸಲ್ ಕಾಡಿನ ನಿಗೂಢತೆಗೆ ಪೂರಕವಾಗಿದೆ ಪ್ರಶಾಂತ್ ಪಿಳ್ಳೈ ಅವರ ಸಂಗೀತ. ಸಜಿತ್ ಪುರುಷನ್ ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಹೆಗ್ಗಳಿಕೆ. ನಿರ್ದೇಶಕರಾದ ಖಾಲಿದ್ ರೆಹಮಾನ್ ಅವರು ಅರ್ಶದ್ ಜೊತೆ ಸೇರಿ ಕಥೆಯನ್ನು ಬರೆದಿದ್ದಾರೆ. ನಿರ್ದೇಶನ ಬಿಗಿಯಾಗಿದೆ. ಕಥೆಯ ಕ್ಲೈಮಾಕ್ಸ್ ಕೂಡ ಭಿನ್ನವಾಗಿದೆ. ಕೇರಳ ಪೊಲೀಸರು ಎಲ್ಲ ಸಮಸ್ಯೆಗಳನ್ನ ಮೀರಿ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಚಿತ್ರದ ಅಂತ್ಯ ಅತ್ಯಂತ ಪರಿಣಾಮಕಾರಿಯಾಗಿ ಮನತಟ್ಟುವಂತೆ ಹೇಳಿದೆ. ಚಿತ್ರದಲ್ಲಿ ಮಮ್ಮುಟ್ಟಿ ನಾಯಕರಾಗಿದ್ದರೂ, ಎಲ್ಲ ಪಾತ್ರಗಳೂ ಮುಖ್ಯವೇ ಎನ್ನಿಸುವಂತೆ ಅವುಗಳಿಗೆ ಪೋಷಣೆಯನ್ನು ನೀಡಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪುವ ಶಕ್ತಿ ‘ಉಂಡ’ ಚಿತ್ರಕ್ಕಿದೆ. ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಎಲ್ಲ ಅರ್ಹತೆಯನ್ನು ನಿರ್ದೇಶಕ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News