×
Ad

ಮುಂದಿನ 2-3 ದಿನಗಳಲ್ಲಿ ಮುಂಗಾರು ಮಳೆ ಇನ್ನಷ್ಟು ವ್ಯಾಪಿಸುವ ಸಾಧ್ಯತೆ:ಐಎಂಡಿ

Update: 2019-06-16 23:22 IST

 ಹೊಸದಿಲ್ಲಿ,ಜೂ.16: ವಾಯು ಚಂಡಮಾರುತವು ತೀವ್ರತೆಯನ್ನು ಕಳೆದುಕೊಂಡು ಗಾಳಿಯು ಅರಬಿ ಸಮುದ್ರದತ್ತ ಚಲಿಸಲು ಅನುಕೂಲವಾಗಿದೆ. ಹೀಗಾಗಿ ಮುಂಗಾರು ಮಳೆ ಇನ್ನಷ್ಟು ವ್ಯಾಪಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ರವಿವಾರ ತಿಳಿಸಿದೆ.

ಈಗಾಗಲೇ ಮುಂಗಾರು ಮಧ್ಯಪ್ರದೇಶದ ಭಾಗಗಳು ,ರಾಜಸ್ಥಾನ,ಉತ್ತರ ಉ.ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಮಧ್ಯ ಭಾರತವನ್ನು ತಲುಪಬೇಕಿತ್ತು,ಆದರೆ ಅದಿನ್ನೂ ಮಹಾರಾಷ್ಟ್ರವನ್ನು ತಲುಪಿಲ್ಲ.

ಮುಂಗಾರು ಮೋಡಗಳು ದಕ್ಷಿಣದಲ್ಲಿ ಮಂಗಳೂರು, ಮೈಸೂರು, ಕುಡ್ಡಲೂರು ಹಾಗೂ ಈಶಾನ್ಯದಲ್ಲಿ ಅಗರ್ತಲಾಕ್ಕಿಂತ ಮುಂದಕ್ಕೆ ಚಲಿಸಿಲ್ಲ. ಪಶ್ಚಿಮ ಕರಾವಳಿಯಲ್ಲಿ ಮಹಾರಾಷ್ಟ್ರದಿಂದ ಗುಜರಾತ್‌ವರೆಗೆ ಚಂಡಮಾರುತದ ಪರಿಣಾಮವಾಗಿ ಮಳೆಯಾಗಿದೆ. ಕೇವಲ ಕರಾವಳಿ ಕರ್ನಾಟಕ ಮತ್ತು ಕೇರಳಗಳಲ್ಲಿ ಮುಂಗಾರು ಮಳೆ ಸುರಿದಿದೆ ಎಂದು ಐಎಂಡಿ ಹೇಳಿದೆ.

  ವಾಯು ಚಂಡಮಾರುತವು ನಿಮ್ನ ಒತ್ತಡವಾಗಿ ಸೋಮವಾರ ಸಂಜೆ ಗುಜರಾತ್ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಇದರಿಂದಾಗಿ ಮಾನ್ಸೂನ್ ಮಾರುತಗಳು ಅರಬಿ ಸಮುದ್ರದತ್ತ ಚಲಿಸಲು ಅನುವಾಗುತ್ತದೆ. ನೈರುತ್ಯ ಮಾನ್ಸೂನ್ ಈ ವರ್ಷ ಒಂದು ವಾರ ವಿಳಂಬವಾಗಿ ಜೂ.8ಕ್ಕೆ ಕೇರಳವನ್ನು ಪ್ರವೇಶಿಸಿತ್ತು.

ವಾಯು ಚಂಡಮಾರುತವು ಮುಂಗಾರು ಮೋಡಗಳ ಚಲನೆಗೆ ತಡೆಯನ್ನೊಡ್ಡಿತ್ತು. ಈಗ ಅದರ ತೀವ್ರತೆ ಕಡಿಮೆಯಾಗುತ್ತಿರುವುದರಿಂದ ಮುಂದಿನ 2-3 ದಿನಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಮುಂಗಾರು ವಿಸ್ತರಣೆಯನ್ನು ನಾವು ನಿರೀಕ್ಷಿಸಿದ್ದೇವೆ ಎಂದು ಐಎಂಡಿಯ ಹೆಚ್ಚುವರಿ ಮಹಾನಿರ್ದೇಶಕ ದೇವೇಂದ್ರ ಪ್ರಧಾನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News