ರಾಮ ರಾಜ್ಯದಲ್ಲಿ ಅಸತ್ಯ, ಅಧರ್ಮ ಜಯಿಸುತ್ತಿರುವುದೇಕೆ?: ಮೋದಿಗೆ ತನುಶ್ರೀ ಪತ್ರ

Update: 2019-06-17 09:45 GMT

ಮುಂಬೈ, ಜೂ.17: ತಾನು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಂಬೈ ಪೊಲೀಸರು ನಟ ನಾನಾ ಪಾಟೇಕರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ನಟಿ ತನುಶ್ರೀ ದತ್ತ ಹೇಳಿಕೆ ನೀಡಿದ್ದಾರಲ್ಲದೆ, “ರಾಮ ರಾಜ್ಯದ ಬಗ್ಗೆ ಮಾತನಾಡುವ ನಿಮ್ಮಂತಹವರ ನೇತೃತ್ವವಿರುವ ದೇಶದಲ್ಲಿ ಪುತ್ರಿಯರೇಕೆ ಇಂತಹ ಕಿರುಕುಳ ಅನುಭವಿಸುತ್ತಿದ್ದಾರೆ?'' ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಪೊಲೀಸರು ನಟನಿಂದ ಲಂಚ ಪಡೆದುಕೊಂಡಿದ್ದಾರೆ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ತನುಶ್ರೀ ಆರೋಪಿಸಿದ್ದು, ತನ್ನ ಪ್ರಕರಣವನ್ನು ನ್ಯಾಯೋಚಿತವಾಗಿ ತನಿಖೆ ನಡೆಸಿಲ್ಲ ಎಂದು ದೂರಿದ್ದಾರೆ.

``ಮೋದೀ ಜಿ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಏನಾಯಿತು ?, ಸರಣಿ ಅಪರಾಧಿಯಿಂದ ಈ ದೇಶದ ಪುತ್ರಿಗೆ ಕಿರುಕುಳವಾಗಿದೆ, ಆಕೆಯ ಮೇಲೆ ಸಾರ್ವಜನಿಕವಾಗಿ ಗುಂಪು ದಾಳಿ ನಡೆದಿದೆ, ಆಕೆಗೆ ನ್ಯಾಯ ಮತ್ತೆ ಮತ್ತೆ ನಿರಾಕರಿಸಲಾಗಿದೆ ಹಾಗೂ ಆಕೆಯ ಮಾನಹಾನಿಗೈಯ್ಯಲಾಗಿದೆ. ಆಕೆಗೆ ಬೆದರಿಕೆ ಒಡ್ಡಲಾಗಿದೆ, ಒತ್ತಡ ಹೇರಲಾಗಿದೆ ಹಾಗೂ ಆಕೆಯ ವೃತ್ತಿಯನ್ನು  ನಾಶಗೊಳಿಸಲಾಗಿದೆ, ವಸ್ತುಶಃ ದೇಶದಿಂದ ಹೊರಕ್ಕೆ  ದೂಡಿ ಅನಾಮಿಕ ಜೀವನ ನಡೆಸುವಂತೆ ಮಾಡಲಾಗಿದೆ. ಆದರೆ ನಿಮ್ಮ ಪೊಲೀಸ್ ಪಡೆ ಆಕೆಯ ದೂರು ಸುಳ್ಳು ಹಾಗೂ ವಂಚನೆಯಿಂದ ಕೂಡಿದೆ ಎನ್ನುತ್ತಿದೆ !!... ಇದು ನಿಮ್ಮ ರಾಮ ರಾಜ್ಯವೇ??, ದೈವಭಕ್ತ ಹಿಂದು  ಕುಟುಂಬದಲ್ಲಿ ಹುಟ್ಟಿದ ನಾನು  ರಾಮ್ ನಾಮ್ ಸತ್ಯ ಹೇ ಎಂದು ಕೇಳಿದ್ದೇನೆ. ಹಾಗಿರುವಾಗ ಈ ದೇಶದಲ್ಲಿ ಅಸತ್ಯ ಮತ್ತು ಅಧರ್ಮ ಸತತ ಜಯ ಗಳಿಸುತ್ತಿದೆಯೇಕೆ? ಜವಾಬ್ ದೀಜಿಯೇ ಮುಝೆ,'' ಎಂದು ಆಕೆ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News