ಉಗ್ರರ ವಿರುದ್ಧ ಹೋರಾಟದಲ್ಲಿ ಮೇಜರ್, ಮೂವರು ಯೋಧರು ಹುತಾತ್ಮ

Update: 2019-06-18 04:47 GMT

ಶ್ರೀನಗರ, ಜೂ.17: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಅಚಾಬಲ್ ಸಮೀಪದ ಬಿದೂರ ಗ್ರಾಮದಲ್ಲಿ ಉಗ್ರರ ಜತೆ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಮೇಜರ್ ಒಬ್ಬರು ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಮೇಜರ್ ಸೇರಿದಂತೆ ಮೂವರು ತೀವ್ರ ಗಾಯಗೊಂಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಒಬ್ಬ ಪಾಕಿಸ್ತಾನಿ ಉಗ್ರ ಹತನಾಗಿದ್ದಾನೆ.

ಮೀರಠ್ ಮೂಲದ 19ನೇ ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಕೇತನ್ ಶರ್ಮಾ ಹುತಾತ್ಮರಾಗಿದ್ದಾರೆ. ಒಬ್ಬ ಪಾಕಿಸ್ತಾನಿ ಉಗ್ರನ ಮೃತದೇಹ ಕೂಡಾ ಪತ್ತೆಯಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಅಪಾರ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹತನಾದ ಉಗ್ರನ ಗುರುತು ಪತ್ತೆ ಪ್ರಯತ್ನಗಳು ನಡೆದಿವೆ.

ಸೋಮವಾರ ಸಂಜೆ ಪುಲ್ವಾಮಾದ ಆರಿಹಾಳ್ ಗ್ರಾಮದಲ್ಲಿ 44 ರಾಷ್ಟ್ರೀಯ ರೈಫಲ್ಸ್‌ನ ಭದ್ರತಾ ವಾಹನವನ್ನು ಗುರಿ ಮಾಡಿ ನಡೆಸಿದ ಇಐಡಿ ಸ್ಫೋಟದಲ್ಲಿ ಕನಿಷ್ಠ 9 ಸೈನಿಕರು ಗಾಯಗೊಂಡಿದ್ದಾರೆ. ಎರಡೂ ಘಟನೆಗಳಲ್ಲಿ ಗಾಯಗೊಂಡ ಸೈನಿಕರನ್ನು ಶ್ರೀನಗರದಲ್ಲಿರುವ ಸೇನೆಯ 92ನೇ ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ದಿನದಲ್ಲಿ ನಡೆದ ಮೂರನೇ ದಾಳಿಯಲ್ಲಿ ಉಗ್ರರು ಪುಲ್ವಾಮಾದ ಟ್ರಾಲ್ ಉಪಜಿಲ್ಲೆಯಲ್ಲಿರುವ 180ನೇ ಸಿಆರ್‌ಪಿಎಫ್ ಬೆಟಾಲಿಯನ್ ಕೇಂದ್ರ ಕಚೇರಿಯ ಮೇಲೆ ಗ್ರೆನೇಡ್ ದಾಳಿ ಮಾಡಡಿದ್ದಾರೆ.

ಭದ್ರತಾ ಪಡೆಗಳು ಅಚಾಬಲ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೊದಲ ದಾಳಿ ನಡೆದಿದೆ. ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿದಾಳಿಯನ್ನು ಯೋಧರು ನಡೆಸಿದರು. ಪುಲ್ವಾಮಾ ದಾಳಿಯಲ್ಲಿ ಇಐಡಿ ಸ್ಫೋಟಿಸಿದ ಉಗ್ರರು ಬಳಿಕ ಸೇನಾ ವಾಹನದತ್ತ ಗುಂಡು ಹಾರಿಸಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ವಾಹನಕ್ಕೆ ಭಾರಿ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News