ಕೃಷ್ಣ ಮೃಗ ಬೇಟೆ: ನಕಲಿ ಅಫಿದಾವಿತ್ ನೀಡಿದ ಪ್ರಕರಣದಲ್ಲಿ ಸಲ್ಮಾನ್ ದೋಷಮುಕ್ತ

Update: 2019-06-17 14:48 GMT

ಜೋಧ್‌ಪುರ, ಜೂ.17: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ನಕಲಿ ಅಫಿದಾವಿತ್ ಸಲ್ಲಿಸಿದ್ದ ಆರೋಪ ಎದುರಿಸುತ್ತಿದ್ದ ನಟ ಸಲ್ಮಾನ್ ಖಾನ್ ಅವರನ್ನು ಜೋಧಪುರ್ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

1998ರಲ್ಲಿ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿರುದ್ಧ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿತ್ತು. ಅವುಗಳಲ್ಲಿ ಒಂದರಲ್ಲಿ ಸಲ್ಮಾನ್ ವಿರುದ್ಧ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ತನ್ನ ಬಂದೂಕಿನ ಪರವಾನಿಗೆಯನ್ನು ನೀಡುವಂತೆ ನ್ಯಾಯಾಲಯ ಸಲ್ಮಾನ್‌ಗೆ ಸೂಚಿಸಿತ್ತು. ಆದರೆ ತನ್ನ ಬಂದೂಕಿನ ಪರವಾನಿಗೆ ಕಳೆದು ಹೋಗಿದೆ ಎಂದು ಸಲ್ಮಾನ್ ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದರು.

 ಈ ಅಫಿದಾವಿತ್ ನಕಲಿ ಎಂದು ಆರೋಪಿಸಿದ ರಾಜಸ್ಥಾನ ಸರಕಾರ 2006ರಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯವು ಸಲ್ಮಾನ್ ವಿರುದ್ಧ 2006ರ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ನ ಸೆಕ್ಷನ್ 340ರ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿತ್ತು. ಸರಕಾರದ ಆರೋಪವನ್ನು ತಳ್ಳಿಹಾಕಿದ್ದ ಸಲ್ಮಾನ್ ಪರ ವಕೀಲ ಹಸ್ತಿಮಲ್ ಸರಸ್ವತಿ, ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಯಾವುದೇ ಉದ್ದೇಶ ನನ್ನ ಕಕ್ಷೀದಾರರಿಗೆ ಇಲ್ಲ ಮತ್ತು ಅವರ ಬಂದೂಕಿನ ಪರವಾನಿಗೆ ನಿಜವಾಗಿಯೂ ಕಳೆದುಹೋಗಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News