ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಆಯ್ಕೆ

Update: 2019-06-17 17:44 GMT

ಹೊಸದಿಲ್ಲಿ, ಜೂ.17: ಮಾಜಿ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.

 ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಅವರು ಚಡ್ಡಾ ಅವರ ಆಯ್ಕೆಯನ್ನು ಪ್ರಕಟಿಸಿದರು. ಸದ್ಯಕ್ಕೆ ಶಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿ ಯಲಿದ್ದಾರೆಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷಾಧ್ಯಕ್ಷ ಅಮಿತ್‌ಶಾ ಉಪಸ್ಥಿತರಿದ್ದರು.

ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಸಾಂಸ್ಥಿಕ ಚುನಾವಣೆಗಳು ನಡೆಯುವ ತನಕ ಪಕ್ಷಾಧ್ಯಕ್ಷರಾಗಿ ಮುಂದುವರಿಯುವಂತೆ ಅಮಿತ್ ಶಾ ಅವರಿಗೆ ಸಂಸದೀಯ ಮಂಡಳಿ ಮನವಿ ಮಾಡಿತ್ತೆನ್ನಲಾಗಿದೆ. ಆದರೆ ಕೇಂದ್ರ ಗೃಹ ಸಚಿವನಾಗಿ ತಾನು ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆಯೆಂದು ಅವರು ಸಂಸದೀಯ ಮಂಡಳಿಯ ಗಮನಕ್ಕೆ ತಂದರೆಂದು ಮೂಲಗಳು ತಿಳಿಸಿವೆ.

ಬಿಜೆಪಿಯು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಇದೇ ಮೊದಲ ಸಲ.ಬಿಜೆಪಿ ಅಧ್ಯಕ್ಷರಾಗಿ ಶಾ ಅವರ ಅಧಿಕಾರಾವಧಿ 2019ರ ಡಿಸೆಂಬರ್‌ಗೆ ಪೂರ್ಣಗೊಂಡಿತ್ತು. ‘ಬಿಜೆಪಿಯು ಓರ್ವ ವ್ಯಕ್ತಿ, ಒಂದು ಹುದ್ದೆ ’ಸಿದ್ಧಾಂತವನ್ನು ಹೊಂದಿರುವುದರಿಂದ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಸಾಧ್ಯತೆಯಿಲ್ಲವೆಂದು ಮೂಲಗಳು ಹೇಳಿವೆ.

ಪ್ರಸ್ತುತ ಬಿಜೆಪಿಯ ಸಂಸದೀಯ ಮಂಡಳಿಯ ಕಾರ್ಯದರ್ಶಿಯಾಗಿರುವ ನಡ್ಡಾ, ಬಿಜೆಪಿಯ ಸಾಂಸ್ಥಿಕ ಚುನಾವಣೆ ಮುಗಿಯುವ ತನಕ ಕಾರ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News