ರಾಜ ರಾಜ ಚೋಳನ ಕುರಿತ ಹೇಳಿಕೆ ವಿವಾದ: ನಿರ್ದೇಶಕ ಪಾ ರಂಜಿತ್‌ಗೆ ಬೆಂಬಲ ಸೂಚಿಸಿದ 300 ಕಲಾವಿದರು

Update: 2019-06-18 18:25 GMT

ಚೆನ್ನೈ,ಜೂ.18: ಜೂನ್ 5ರಂದು ಚಕ್ರವರ್ತಿ ರಾಜ ರಾಜ ಚೋಳನ ಕುರಿತು ಹೇಳಿಕೆ ನೀಡಿದ್ದ ಸಿನೆಮಾ ನಿರ್ದೇಶಕ ಪಾ ರಂಜಿತ್ ಅವರಿಗೆ ತಮಿಳು ನಾಡಿನ ಮುನ್ನೂರು ಕಲಾವಿದರು ಬೆಂಬಲ ಸೂಚಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ತನ್ನ ನಿಲುವನ್ನು ವ್ಯಕ್ತಪಡಿಸಿದ್ದಕ್ಕಾಗಿ ಪಾ ರಂಜಿತ್ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳು ಮತ್ತು ಕೊಲೆ ಬೆದರಿಕೆಗಳು ಹಾಗೂ ಪೊಲೀಸ್ ಕಾರ್ಯಾಚರಣೆಯ ಬೆದರಿಕೆಗಳ ವಿರುದ್ಧ ಕಲಾವಿದರ ವಾಕ್‌ಸ್ವಾತಂತ್ರದ ಮೈತ್ರಿ ಎಂಬ ಸಂಘಟನೆಯಡಿಯಲ್ಲಿ ಒಟ್ಟುಗೂಡಿದ ಕಲಾವಿದರು ಕಿಡಿಕಾರಿದ್ದಾರೆ. ರಂಜಿತ್ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕೆಂದು ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿಯವರನ್ನು ಆಗ್ರಹಿಸುವ ಆನ್‌ಲೈನ್ ಅಭಿಯಾನವನ್ನೂ ಕಲಾವಿದರು ಆರಂಭಿಸಿದ್ದಾರೆ. ನೀಲ ಪುಲಿಗಳ್ ಇಯಕ್ಕಮ್ ಪಕ್ಷದ ಸ್ಥಾಪಕ ಉಮರ್ ಫಾರೂಖ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಕುಂಭಕೋಣಂನಲ್ಲಿ ಮಾತನಾಡಿದ ಪಾ ರಂಜಿತ್, ಯಾವ ರೀತಿ ಜಾತಿ ವಿಭಜನೆಗಳು ಮತ್ತು ತಾರತಮ್ಯಗಳು ತಮಿಳು ಹೆಮ್ಮೆ ಮತ್ತು ಸಮುದಾಯಗಳ ಸಾಮಾನ್ಯ ಸಂಭಾಷಣೆಯಲ್ಲಿ ಕಾಣುವುದಿಲ್ಲ ಎನ್ನುವುದನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು, ರಾಜ ರಾಜ ಚೋಳನನ್ನು ತಮ್ಮವ ಎಂದು ಬಿಂಬಿಸಲು ದಲಿತ ಜಾತಿಗೆ ಸೇರಿದ ಪರೆಯರ್ಸ್ ಸೇರಿದಂತೆ ವಿವಿಧ ಜಾತಿಗಳ ಮಧ್ಯೆ ಯಾವ ರೀತಿ ಹೋರಾಟ ನಡೆಯುತ್ತಿದೆ ಎನ್ನುವುದನ್ನು ವಿವರಿಸಿದ್ದರು. ರಾಜ ರಾಜ ಚೋಳನನ್ನು ನನ್ನವ ಎಂದು ಹೇಳಲು ನನಗೆ ಯಾವುದೇ ಆಸಕ್ತಿಯಿಲ್ಲ. ಯಾಕೆಂದರೆ ಆತನ ಆಳ್ವಿಕೆಯ ಕಾಲ, ಜನರ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ದಲಿತರ ಪಾಲಿಗೆ ಕೆಟ್ಟ ಕಾಲವಾಗಿತ್ತು ಎಂದು ಅವರು ತಿಳಿಸಿದ್ದರು

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News