ಕೊಲೆ ಯತ್ನ ಪ್ರಕರಣ: ಕೇಂದ್ರ ಸಚಿವನ ಪುತ್ರ ಬಂಧನ

Update: 2019-06-19 05:44 GMT

ಭೋಪಾಲ್: ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಪುತ್ರನನ್ನು ಕೊಲೆ ಯತ್ನ ಆರೋಪದಲ್ಲಿ ಮಂಗಳವಾರ ಬಂಧಿಸಲಾಗಿದೆ.

ಮಧ್ಯಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪ್ರಬಲ್ ಪಟೇಲ್ (26) ನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಪ್ರಬಲ್ ತಲೆ ಮರೆಸಿಕೊಂಡಿದ್ದ.

ಗೋಟೆಗಾಂವ್ ನರಸಿಂಗ್‌ಪುರ ಜಿಲ್ಲೆಯಲ್ಲಿ, ಪ್ರಬಲ್ ಪಟೇಲ್ ನೇತೃತ್ವದ ಗುಂಪು ದಾಳಿ ಮಾಡಿತ್ತು ಎಂದು ಆಪಾದಿಸಲಾಗಿದೆ. ಸಚಿವರ ಅಳಿಯ ಕೂಡಾ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆತನನ್ನು ಇದುವರೆಗೆ ಬಂಧಿಸಿಲ್ಲ. ಈತನ ತಂದೆ ಜಲಮ್ ಸಿಂಗ್ ಪಟೇಲ್ ಬಿಜೆಪಿ ಶಾಸಕ.

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಈಶ್ವರ್ ರಾಯ್ (50) ಎಂಬ ಗೃಹರಕ್ಷಕ ದಳ ಸಿಬ್ಬಂದಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಸೋಮವಾರ ಮಧ್ಯರಾತ್ರಿ ಕೇಂದ್ರ ಸಚಿವರ ಪುತ್ರ ಹಾಗೂ ಆತನ ಸಹಚರರ ಜತೆ ಇಬ್ಬರು ವ್ಯಕ್ತಿಗಳು ವಾಗ್ವಾದಕ್ಕೆ ಇಳಿದ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಸಚಿವರ ಪುತ್ರ, ಅಳಿಯ ಹಾಗೂ ಸಹಚರರು ಮೊದಲು ಇಬ್ಬರ ಮೇಲೆ ಹಲ್ಲೆ ನಡೆಸಿ, ಅವರನ್ನು ಗೃಹರಕ್ಷಕ ಈಶ್ವರ್ ರಾಯ್ ಅವರ ಮನೆಗೆ ಕರೆದೊಯ್ದರು. ಈ ಮೊದಲು ಪ್ರಬಲ್ ಪಟೇಲ್‌ನ ಆಪ್ತನಾಗಿದ್ದ ಈಶ್ವರ ರಾಯ್ ಪುತ್ರ ಆ ಬಳಿಕ ಬೇರ್ಪಟ್ಟಿದ್ದ ಎನ್ನಲಾಗಿದೆ. ಆರೋಪಿಗಳು ರಾಯ್ ಪುತ್ರನನ್ನು ಹೊರಕ್ಕೆ ಕರೆದು ಕಬ್ಬಿಣದ ರಾಡ್ ಮತ್ತು ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ಮಾಡಿದರು ಎನ್ನಲಾಗಿದೆ. ಮಗನ ಮೇಲೆ ಹಲ್ಲೆಯಾಗುತ್ತಿರುವುದನ್ನು ನೋಡಿದ ಈಶ್ವರ್ ರಾಯ್ ಹೊರಬಂದಾಗ ಅವರ ಮೇಲೆಯೂ ಹಲ್ಲೆ ನಡೆಸಲಾಯಿತು ಎಂದು ಆಪಾದಿಸಲಾಗಿದೆ. ಆರೋಪಿಗಳು ಗುಂಡು ಹಾರಿಸಿ ಒಬ್ಬನನ್ನು ಗಾಯಗೊಳಿಸಿದ್ದಾರೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 147, 48, 149 (ದೊಂಬಿ), 365 (ಅಪಹರಣ), 294 (ನಿಂದನಾತ್ಮಕ ನಡವಳಿಕೆ) ಮತ್ತು 427 ಅನ್ವಯ 20 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News