ಮಕ್ಕಳಿಗೆ ಸಂಬಂಧಗಳ ಮಹತ್ವ ತಿಳಿಯಲಿ

Update: 2019-06-19 18:26 GMT

ಮಾನ್ಯರೇ,

ಆಧುನಿಕ ಯುಗದಲ್ಲಿ ಸಂಬಂಧಗಳು ಅವುಗಳ ವೌಲ್ಯವನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ ಎಂಬುದನ್ನು ಅವಲೋಕನ ನಡೆಸಬೇಕಾದ ಅವಶ್ಯಕತೆಯಿದೆ. ಹುಟ್ಟಿದ ಮಗುವಿಗೆ ಅಮ್ಮ ಎನ್ನುವ ಪದದ ಬದಲು ಮಮ್ಮಿ ಎನ್ನುವ ಪದ ಬಳಕೆಯಿಂದ ತೊಡಗಿ ಹಿರಿಯರು, ಕಿರಿಯರಿಗೆ ಅಂಕಲ್, ಆಂಟಿ ಎಂಬ ಪರ್ಯಾಯ ಪದಗಳ ಪಾಠವನ್ನು ನಾವು ಇಂದಿನ ಪೀಳಿಗೆಗೆ ಮಾಡುತ್ತಿದ್ದೇವೆ. ಅದೊಂದು ಕಾಲಘಟ್ಟದಲ್ಲಿ ಮಗುವಿನ ಬೆಳವಣಿಗೆಯಲ್ಲಿ ಅಜ್ಜ-ಅಜ್ಜಿಯ ಪಾತ್ರ ಪ್ರಮುಖವೆನಿಸುತ್ತಿತ್ತು. ಅಜ್ಜ-ಅಜ್ಜಿ ಪ್ರೀತಿ ನೀಡುವುದರ ಜೊತೆ ಜೊತೆಗೆ ಹೇಳುತ್ತಿದ್ದ ಕಥೆಗಳು ಎಷ್ಟೋ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿದ್ದುಂಟು. ಆದರೆ ಇಂದು ಪೋಷಕರು ಮಕ್ಕಳ ಬೆಳವಣಿಗೆಯ ಹಂತದಲ್ಲಿ ಸಿಗಬೇಕಾದ ಪ್ರೀತಿ, ಸಂಸ್ಕಾರ ಯಾವುದನ್ನೂ ಸರಿಯಾದ ರೀತಿಯಲ್ಲಿ ನೀಡದೆ, ಮಕ್ಕಳ ಆರೈಕೆಗೆ ಕೆಲಸದವರನ್ನೋ ಅಥವಾ ಮಕ್ಕಳನ್ನು ನೋಡಿಕೊಳ್ಳುವ ಸಂಸ್ಥೆಯಲ್ಲೋ ಇರಿಸುತ್ತಿದ್ದಾರೆ. ಯಾಂತ್ರಿಕತೆಯ ಈ ಯುಗದಲ್ಲಿ ನಾವು ಮಕ್ಕಳಿಗೆ ನೀಡುವ ಪ್ರೀತಿ, ತೋರುವ ಕಾಳಜಿಯು ಕೂಡ ಕೃತಕವಾಗತೊಡಗುತ್ತಿದೆಯೇ ಎಂಬ ಸಂಶಯ ಬಂದರೂ ಆಶ್ಚರ್ಯವೇನಿಲ್ಲ. ಮಗು ತಂದೆ-ತಾಯಿಯನ್ನೇ ವಾರಾಂತ್ಯದ ರಜಾ ದಿನಗಳಲ್ಲಿ ನೋಡುವ ಪರಿಸ್ಥಿತಿ ಬಂದೊದಗಿದೆ. ಇಂತಹ ವಿಷಯಗಳು ಪೋಷಕರಿಗೆ ಚಿಕ್ಕದಾಗಿ ಕಂಡರೂ ಬೆಳೆಯುತ್ತಿರುವ ಮಗುವಿನ ಮನಸ್ಸಿನ ಮೇಲೆ ಪ್ರಭಾವಬೀರುವುದರಲ್ಲಿ ಎರಡು ಮಾತಿಲ್ಲ. ಹಣದ ಮೂಲಕ ವಸ್ತುಗಳನ್ನು ಕೊಳ್ಳಬಹುದೇ ಹೊರತು ಪ್ರೀತಿಯನ್ನಲ್ಲ.

ಇಂದಿನ ವಿಭಕ್ತ ಕುಟುಂಬದಲ್ಲಿ ಅಜ್ಜ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಹೀಗೆ ಹಲವಾರು ಸಂಬಂಧಗಳ ನಡುವೆ ಇರುವ ಬಾಂಧವ್ಯವನ್ನು ಸಂಬಂಧಗಳ ಹೆಸರುಗಳಲ್ಲೇ ಮಕ್ಕಳಿಗೆ ತಿಳಿಸುವಲ್ಲೇ ಸೀಮಿತವಾಗಿರುವುದು ವಿಷಾದನೀಯ. ಈಗ ಸುಲಭವೆನಿಸಿದರೂ ಮುಂದೊಂದು ದಿನ ಬೆಲೆ ತೆರಬೇಕಾಗುವ ಕ್ಷಣಗಳು ಬಂದರೂ ಬರಬಹುದು. ಹಾಗಾಗಿ ಆಯಾಯ ಸಂಬಂಧಗಳ ಮಹತ್ವವನ್ನು ಮಕ್ಕಳು ಬೆಳೆಯುವ ಹಂತದಲ್ಲೇ ತಿಳಿ ಹೇಳುವುದರಿಂದ ಭವಿಷ್ಯವನ್ನು ಒಂದೊಳ್ಳೆ ಮಾರ್ಗದಲ್ಲಿ ಹೋಗುವ ಹಾಗೆ ಪೋಷಕರಾಗಿ ನಾವು ನೋಡಿಕೊಳ್ಳಬಹುದು.

Writer - -ಪ್ರದೀಪ ಶೆಟ್ಟಿ, ಬೇಳೂರು.

contributor

Editor - -ಪ್ರದೀಪ ಶೆಟ್ಟಿ, ಬೇಳೂರು.

contributor

Similar News