ಕೈತುಂಬಾ ಸಂಬಳ ಪಡೆಯುತ್ತಿದ್ದವನ ಬದುಕನ್ನೆ ಬದಲಿಸಿದ ನಾಯಿಯ ಸಾವು!

Update: 2019-06-20 17:43 GMT

ಮುದ್ದಿನ ಸಾಕುನಾಯಿಯನ್ನು ಹೊಂದಿರುವುದು ಮನಸ್ಸಿಗೆ ಸುಖ ನೀಡುತ್ತದೆ. ಅದು ಎಷ್ಟು ಆಪ್ತವಾಗಿರುತ್ತದೆ ಎಂದರೆ ಹೆಚ್ಚಿನವರು ಅದನ್ನು ಕುಟುಂಬದ ಸದಸ್ಯನೆಂದೇ ಪರಿಗಣಿಸುತ್ತಾರೆ. ಆದರೆ ವಿಷಾದವೆಂದರೆ ಇಂತಹ ಪ್ರಾಣಿಗಳು ನಾವು ಬಯಸಿದಷ್ಟು ದೀರ್ಘಾಯುಷ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಪ್ರೀತಿಯಿಂದ ಸಾಕಿದ ನಾಯಿ ಇನ್ನಿಲ್ಲವೆಂದಾಗ ಇಡೀ ಕುಟುಂಬಕ್ಕೆ ಅದು ದೊಡ್ಡ ನಷ್ಟವಾಗುತ್ತದೆ. ಜೀವನದಲ್ಲಿ ನಾಯಿಗಳನ್ನೆಂದಿಗೂ ಸಾಕದವರಿಗೆ ಈ ಭಾವನೆಗಳು ಅರ್ಥವಾಗುವುದಿಲ್ಲ ಬಿಡಿ. ತಾನು ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ನಾಯಿ ಸತ್ತು ಹೋದ ಮೇಲೆ ಆ ನೋವನ್ನು ಮರೆಯಲು ಬೀದಿನಾಯಿಗಳನ್ನು ಸಾಕಿ ಅಗಾಧ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವ್ಯಕ್ತಿಯ ಕಥೆಯನ್ನು ಓದಿದರೆ ನಿಮಗೂ ಅಯ್ಯೋ ಎನಿಸದಿರದು.

ಚೀನಾದ ಚೆಂಗ್‌ಡು ನಿವಾಸಿಯಾಗಿರುವ 41ರ ಹರೆಯದ ಝಾಂಗ್ ಕಾಯ್ ತನ್ನ ಸಾಕುನಾಯಿಯ ಸಾವು ತನ್ನ ಜೀವನವನ್ನು ಬದಲಿಸುವವರೆಗೆ ಪರಿಪೂರ್ಣ,ಶಾಂತಿಯುತ ಮತ್ತು ಸುಖಿ ಬದುಕನ್ನು ನಡೆಸಿಕೊಂಡಿದ್ದ. ಸರಕಾರಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೈತುಂಬ ಸಂಬಳ ಪಡೆಯುತ್ತಿದ್ದ ಆತ ತನ್ನದೇ ಆದ ಟ್ರಾವೆಲ್ ಏಜೆನ್ಸಿಯೊಂದನ್ನೂ ಹೊಂದಿದ್ದ.

ಝಾಂಗ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ 13 ವರ್ಷ ಪ್ರಾಯದ ಸಾಕುನಾಯಿ ಅದೊಂದು ದಿನ ದಿಢೀರ್ ಸಾವು ಕಂಡ ಬಳಿಕ ಆತನ ಬದುಕಿನಲ್ಲಿ ಶೂನ್ಯವೇ ತುಂಬಿಕೊಂಡಿತ್ತು. ತನ್ನ ಮುದ್ದಿನ ನಾಯಿಯ ಅಗಲಿಕೆಯ ನೋವನ್ನು ಮರೆಯಲು ಆತ ಬೀದಿಗಳಲ್ಲಿ ಅನಾಥವಾಗಿ ತಿರುಗಾಡುತ್ತಿದ್ದ ನಾಯಿಗಳತ್ತ ಗಮನ ಹರಿಸಲು ಆರಂಭಿಸಿದ್ದ. ಆರಂಭದಲ್ಲಿ ಎರಡು ಬೀದಿ ನಾಯಿಗಳನ್ನು ಕರೆತಂದು ಅವುಗಳನ್ನು ತನ್ನ ಟ್ರಾವೆಲ್ ಏಜೆನ್ಸಿಯ ಕಚೇರಿಯೊಳಗೆ ಸಾಕಿದ್ದ. ಕೆಲವೇ ದಿನಗಳಲ್ಲಿ ಇನ್ನೂ ಎಂಟು ಬೀದಿನಾಯಿಗಳ ಪಾಲಿಗೆ ಆತ ಪೋಷಕನಾಗಿದ್ದ.

 ಕಚೇರಿಯಲ್ಲಿ ಸ್ಥಳದ ಕೊರತೆಯಾದಾಗ ಝಾಂಗ್ ನಾಯಿಗಳನ್ನು ಮನೆಗೇ ತಂದು ಸಾಕತೊಡಗಿದ್ದ. ನಾಯಿಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಹಲವಾರು ಮನೆಗಳನ್ನು ಬದಲಿಸಿದ್ದ ಆತ ಅಂತಿಮವಾಗಿ ತನ್ನ ಮನೆಗೆ ಸಮೀಪವಿರುವ ಪಾಳು ಬಿದ್ದಿರುವ ಫ್ಯಾಕ್ಟರಿಯೊಂದನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಅಲ್ಲಿ ತನ್ನ ನಾಯಿಗಳ ಪೋಷಣ ಕೇಂದ್ರವನ್ನು ಆರಂಭಿಸಿದ್ದು,ಅದಕ್ಕೆ ಲಿಟ್ಲ್ ಏಂಜೆಲ್ ಆ್ಯನಿಮಲ್ ಪ್ರೊಟೆಕ್ಷನ್ ಸೆಂಟರ್ ಎಂಬ ಹೆಸರಿಟ್ಟಿದ್ದಾನೆ. ಝಾಂಗ್ ಪ್ರತಿ ದಿನವೂ ಹೊಸದಾಗಿ ಬೀದಿನಾಯಿಗಳನ್ನು ತಂದು ಅಲ್ಲಿಗೆ ಸೇರಿಸುತ್ತಿದ್ದರಿಂದ ಅವುಗಳ ಸಂಖ್ಯೆ 300ನ್ನು ದಾಟಿತ್ತು. ಕೆಲವು ನಾಯಿಗಳನ್ನು ಪ್ರಾಣಿಪ್ರಿಯರು ದತ್ತು ಪಡೆದಿರುವದರಿಂದ ಈಗ ಆತನ ರಕ್ಷಣೆಯಲ್ಲಿ ಸುಮಾರು 260 ನಾಯಿಗಳಿವೆ.

ಝಾಂಗ್‌ನ ಕಾರ್ಯದಿಂದ ಪ್ರಭಾವಕ್ಕೊಳಗಾದ ಪ್ರಾಣಿಪ್ರಿಯರು ಆರಂಭದಲ್ಲಿ ತಮ್ಮ ದೇಣಿಗೆಗಳನ್ನು ನೀಡಿದ್ದರು. ಆದರೆ ನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಈ ದೇಣಿಗೆಗಳು ಯಾವುದಕ್ಕೂ ಸಾಲದಂತಾಗಿದ್ದವು. ಝಾಂಗ್ ಪ್ರತಿ ತಿಂಗಳು ನಾಯಿಗಳಿಗಾಗಿ ಮಾಡುತ್ತಿರುವ ವೆಚ್ಚವು ಆತನ ಸಂಬಳ ಮತ್ತು ಟ್ರಾವೆಲ್ ಏಜೆನ್ಸಿಯಿಂದ ಬರುತ್ತಿರುವ ಆದಾಯವನ್ನೂ ಮೀರುತ್ತಿದೆ. ಹೀಗಾಗಿ ಝಾಂಗ್ ಬ್ಯಾಂಕ್‌ಗಳಿಂದ ಸಾಲಗಳನ್ನು ಪಡೆಯುವುದು ಅನಿವಾರ್ಯವಾಗಿತ್ತು.

ನಂಬಿದರೆ ನಂಬಿ,ಬಿಟ್ಟರೆ ಬಿಡಿ....ಝಾಂಗ್ ತನ್ನ ನಾಯಿಗಳಿಗಾಗಿ ಪ್ರತಿ ತಿಂಗಳೂ ಸುಮಾರು ಎರಡು ಲಕ್ಷ ರೂ.ಗಳನ್ನು ವೆಚ್ಚ ಮಾಡುತ್ತಿದ್ದಾನೆ. ಪ್ರತಿ ದಿನ ಆತ ನಾಯಿ ಆಹಾರದ ತಲಾ 40 ಕೆಜಿಗಳ ಎರಡು ಚೀಲಗಳನ್ನು ಖರೀದಿಸುತ್ತಿದ್ದಾನೆ.

ಅಲ್ಲದೆ ಈ ನಾಯಿಗಳನ್ನು ನೋಡಿಕೊಳ್ಳಲೆಂದೇ ಇಬ್ಬರನ್ನು ನೇಮಿಸಿಕೊಂಡಿದ್ದು,ಅವರಿಗೆ ತಿಂಗಳಿಗೆ ಒಟ್ಟು 60,000 ರೂ.ಸಂಬಳವನ್ನು ನೀಡುತ್ತಿದ್ದಾನೆ.

ಸಾಲಗಳನ್ನು ಬಹುಬೇಗನೆ ತೀರಿಸುತ್ತೇನೆ ಎಂದು ಝಾಂಗ್ ಆರಂಭದಲ್ಲಿ ಭಾವಿಸಿದ್ದ. ಆದರೆ ಬೀದಿನಾಯಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದ್ದರಿಂದ ಸಾಲವೂ ಹೆಚ್ಚುತ್ತಲೇ ಇತ್ತು. ತಾನು ಸಾಲ ಮಾಡಿಕೊಂಡಿರುವ ವಿಷಯವನ್ನು ಝಾಂಗ್ ತನ್ನ ಹೆತ್ತವರ ಬಳಿ ಒಪ್ಪಿಕೊಂಡಿದ್ದ. ಪಿಂಚಣಿಯನ್ನು ಪಡೆಯುತ್ತಿರುವ ಅವರ ಬಳಿ ಝಾಂಗ್‌ನ ಸಾಲ ತೀರಿಸಲು ಹಣವಿಲ್ಲ. ಅದರಲ್ಲೂ 60 ಲಕ್ಷ ರೂ.ಗಳ ಸಾಲದ ಹೊರೆ ಮಗನ ತಲೆಯ ಮೇಲಿರುವುದು ಅವರನ್ನು ಹತಾಶರನ್ನಾಗಿಸಿತ್ತು. ಹೀಗಾಗಿ ಅವರು ಈ ಇಳಿವಯಸ್ಸಿನಲ್ಲಿಯೂ ಮತ್ತೆ ದುಡಿಯಲು ಆರಂಭಿಸಿದ್ದಾರೆ ಮತ್ತು ಸಾಲವನ್ನು ತೀರಿಸಲು ಆತನಿಗೆ ನೆರವಾಗುತ್ತಿದ್ದಾರೆ. ಆದರೆ ಝಾಂಗ್ ಮಾತ್ರ ತನ್ನ ನಾಯಿಗಳನ್ನು ಬಿಡಲು ಸಿದ್ಧನಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News