ಆಡಳಿತದ ವೈರುಧ್ಯ

Update: 2019-06-20 18:36 GMT

ಭಾರತೀಯ ದಂಡ ಸಂಹಿತೆಯ ಎರಡನೆಯ ಪರಿಚ್ಛೇದ ಹೀಗಿದೆ: ‘‘ಪ್ರತಿಯೊಬ್ಬ ವ್ಯಕ್ತಿಯು ಈ ಕಾನೂನಿನಲ್ಲಿ ಸೂಚಿಸಲಾದ ನಿಬಂಧನೆಗಳಿಗೆ ವಿರುದ್ಧವಾದಂತಹ ಕಾರ್ಯವನ್ನಾಗಲೀ ಕರ್ತವ್ಯಲೋಪವನ್ನಾಗಲೀ ಎಸಗಿ ಬ್ರಿಟಿಷ್ ಭಾರತದ ಒಳಗೆ ತಪ್ಪಿತಸ್ಥನಾದಲ್ಲಿ ಆತ ಈ ಸಂಹಿತೆ ಪ್ರಕಾರ ದಂಡನೆಗೆ ಅರ್ಹನಾಗುತ್ತಾನೆ.’’

ಇದಕ್ಕೆ ಹಿನ್ನೆಲೆಯಾಗಿ, ಈ ಸಂಹಿತೆಯ ಕರಡನ್ನು ತಯಾರಿಸಿದ ಅಧಿಕಾರಿಗಳು, ಸರಕಾರದ ಕಾರ್ಯದರ್ಶಿಗಳಿಗೆ ಬರೆದು ಇದರಲ್ಲಿರುವ ‘‘ಪ್ರತಿಯೊಬ್ಬ ವ್ಯಕ್ತಿ’’ ಎಂಬ ಪದಗಳ ಬಗ್ಗೆ ಅವರ ಗಮನ ಸೆಳೆಯುವುದು ಅಗತ್ಯವೆಂದು ಯೋಚಿಸಿದರು. ಅವರಲ್ಲಿ ಅವರು ಹೀಗೆಂದು ಬರೆದಿದ್ದಾರೆ:

 ‘‘ಮಂಡಳಿಯ ಘನಪ್ರಭುಗಳು ಗಮನಿಸುವಂತೆ ನಾವು ಈ ಸಂಹಿತೆಯ ವ್ಯಾಪ್ತಿಯಿಂದ ಕಂಪೆನಿ ಸರಕಾರದ ಗಡಿಯೊಳಗಿನ ಭಾರತದ ಯಾವುದೇ ಪ್ರಾಚೀನ ರಾಜ ಕುಟುಂಬಗಳನ್ನೂ ಹೊರತುಪಡಿಸಬೇಕೆಂದು ಯೋಚಿಸಿಲ್ಲ. ಹಾಗೆ ಹೊರತುಪಡಿಸಬೇಕೇ ಎಂಬ ಪ್ರಶ್ನೆಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಒಪ್ಪಂದಗಳ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನಮಗೆ ಇಲ್ಲದೇ ಇರುವ ಕಾರಣದಿಂದ ಆ ಒಪ್ಪಂದಗಳನ್ನು ಹೇಗೆ ಅರ್ಥೈಸಿಕೊಳ್ಳಲಾಗಿದೆ, ಅದರ ಹಿನ್ನೆಲೆಯ ಚರ್ಚೆ, ಹೊಂದಾಣಿಕೆಗಳ ಇತಿಹಾಸವೇನು, ಅಂತಹ ನಿರ್ದಿಷ್ಟ ಕುಟುಂಬಗಳ ಶಕ್ತಿ ಮತ್ತು ಮನೋಧರ್ಮ ಎಂಥದು ಮತ್ತು ಅಂಥ ಕುಟುಂಬಗಳ ಬಗ್ಗೆ ಜನಸಮುದಾಯಕ್ಕಿರುವ ಭಾವನೆಯೇನು - ಇವೆಲ್ಲವೂ ನಮಗೆ ತಿಳಿದಿಲ್ಲವಾದ್ದರಿಂದ ಈ ಪ್ರಶ್ನೆಯನ್ನು ನಾವು ನಿರ್ಧರಿಸುವ ಗೋಜಿಗೆ ಹೋಗಿಲ್ಲ. ಇದರ ಬಗ್ಗೆ ಗೌರವದಿಂದ ತಮ್ಮ ಅಪ್ಪಣೆಯೊಂದಿಗೆ ನಾವು ಹೇಳಬಯಸುವುದೇನೆಂದರೆ, ಹೀಗೆ ಕೆಲವರನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರತುಪಡಿಸುವುದು ಒಂದು ಕೆಡುಕು; ಅದಕ್ಕಿಂತಲೂ ದೊಡ್ಡ ಕೆಡುಕು ಈ ಕಾನೂನಿಗಿಂತ ಮೇಲಿರುವುದೇ ದೊಡ್ಡ ಜನರ ಒಂದು ವಿಶೇಷಾಧಿಕಾರ ಎಂದು ಜನ ಭಾವಿಸುತ್ತಾರೆನ್ನುವುದು; ಹಾಗೂ ಇಂಥ ವಿಶೇಷಾಧಿಕಾರಿಗಳನ್ನು ಎಷ್ಟೆಷ್ಟು ಕಾಲ ಮುಂದುವರಿಸಲಾಗುತ್ತದೋ ಅಷ್ಟಷ್ಟು ಅದನ್ನು ವಾಪಸು ಪಡೆಯುವುದು ಕಷ್ಟವಾಗುತ್ತ ಹೋಗುತ್ತದೆನ್ನುವುದು ; ಮತ್ತು - ಹಾಗಿರುವ ವಿಶೇಷ ಅಧಿಕಾರಿಗಳನ್ನು ತೆಗೆದುಹಾಕಲು ಸರಕಾರಕ್ಕೆ ಈಗಿರುವಂತಹ ಅವಕಾಶಕ್ಕಿಂತ ಒಳ್ಳೆಯ ಅವಕಾಶ ಇನ್ನೆಂದೂ ಸಿಕ್ಕಲಾರದು. ಏಕೆಂದರೆ ಈಗ ಸರಕಾರ ಎಲ್ಲ ಧರ್ಮಗಳ ಎಲ್ಲ ಜನಾಂಗಗಳ ಜನರಿಗೂ ಅನ್ವಯವಾಗುವಂತಹ ಹೊಸ ಸಂಹಿತೆಯನ್ನು ಜಾರಿಗೆ ತರುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ನಾವು ಸೂಚಿಸುತ್ತಿರುವುದೇನೆಂದರೆ, ಸಂಪೂರ್ಣವಾಗಿ ನೀಡಲ್ಪಟ್ಟಿರುವ ಸಾರ್ವಜನಿಕ ವಿಶ್ವಾಸವೊಂದನ್ನು ಬಿಟ್ಟು, ಇನ್ನಾವುದೇ ದಾಕ್ಷಿಣ್ಯವೂ ಸಮಾನ ನ್ಯಾಯದ ಕಲ್ಪನೆಯ ಎದುರು ನಿಲ್ಲಬಾರದು.’’

  ಇಂಥ ಸಮಾನ ನ್ಯಾಯದ ಕಲ್ಪನೆ ಸ್ಥಾಪಿತ ವ್ಯವಸ್ಥೆಗೆ ಮರಣಾಘಾತವನ್ನು ಕೊಡುತ್ತದೆ ಎಂದು ಅವರು ಆಗ ಭಾವಿಸಿಬೇಕು. ಆದರೆ ನಿಜವಾಗಿ ಆದದ್ದೆಂದರೆ, ಸ್ಥಾಪಿತ ವ್ಯವಸ್ಥೆಗೆ ಆಘಾತವಾಗುವ ಬದಲು ಅದು ಯಾವುದೇ ಎಗ್ಗಿಲ್ಲದೆ ಮುಂದುವರಿದುಕೊಂಡಿದೆ. ಸಮಾನ ನ್ಯಾಯದ ಕಲ್ಪನೆ ನಿರೀಕ್ಷಿತ ಪರಿಣಾಮ ತರಲು ಯಾಕೆ ಸೋತಿತೆಂದು ಇಲ್ಲಿ ಕೇಳಿಕೊಳ್ಳಬಹುದು. ಉತ್ತರ ಸರಳ. ನ್ಯಾಯದ ತತ್ತ್ವವನ್ನು ಘೋಷಿಸುವುದು ಒಂದು ಕಾರ್ಯ, ಅದನ್ನು ಜಾರಿಗೆ ತರುವುದು ಇನ್ನೊಂದು ಕಾರ್ಯ. ಸಮಾನ ನ್ಯಾಯದ ತತ್ವ ಜಾರಿಯಲ್ಲಿದೆಯೇ ಇಲ್ಲವೇ ಎಂಬುದು ಆತತ್ವವನ್ನು ಆಚರಣೆಗೆ ತರುವ ಸರಕಾರಿ ನೌಕರರ ಪಾತ್ರವನ್ನು ಮತ್ತು ರೀತಿಯನ್ನು ಅವಲಂಬಿಸಿದೆ. ತಮ್ಮ ವರ್ಗ ಪಕ್ಷಪಾತದ ಕಾರಣದಿಂದ ಸರಕಾರಿ ನೌಕರರು, ಸ್ಥಾಪಿತ ವ್ಯವಸ್ಥೆಯ ಮಿತ್ರರೂ ಹೊಸ ವ್ಯವಸ್ಥೆಯ ಶತ್ರುಗಳೂ ಆಗಿದ್ದರೆ, ಹೊಸ ವ್ಯವಸ್ಥೆ ಹುಟ್ಟಲಿಕ್ಕೇ ಸಾಧ್ಯವಿಲ್ಲ. ಹೊಸ ವ್ಯವಸ್ಥೆಯೊಂದು ಯಶಸ್ವಿಯಾಗಲು ಹೊಸ ವ್ಯವಸ್ಥೆಗೆ ಸಹಸ್ಪಂದಿಯಾಗಿರುವ ಅಧಿಕಾರವರ್ಗವೊಂದು ಇರಬೇಕೆಂಬ ಸತ್ಯವನ್ನು 1871ರಲ್ಲಿ ಕಾರ್ಲ್‌ಮಾರ್ಕ್ಸ್ ಪ್ಯಾರಿಸ್ ಕಮ್ಯುನ್‌ನ ನಿರ್ಮಾಣದ ಸಂದರ್ಭದಲ್ಲಿ ಮನಗಂಡಿದ್ದ. ಮುಂದೆ ಲೆನಿನ್ ರಷಿಯನ್ ಕಮ್ಯುನಿಸಮ್‌ನ ಸ್ಥಾಪನೆಯಲ್ಲೂ ಇದನ್ನೇ ಬಳಸಿಕೊಂಡ. ದುರದೃಷ್ಟವಶಾತ್, ಬ್ರಿಟಿಷ್ ಸರಕಾರ, ಸ್ಥಾಪಿತ ವ್ಯವಸ್ಥೆಯನ್ನು ನಂಬುವ ಮತ್ತು ಸಮಾನ ನ್ಯಾಯದ ಕಲ್ಪನೆಯನ್ನಿಟ್ಟುಕೊಂಡಿರದ ಹಿಂದೂ ಜನ ವರ್ಗಗಳಿಗೆ ತಮ್ಮ ಆಡಳಿತ ಯಂತ್ರದ ಬಾಗಿಲುಗಳನ್ನು ತೆರೆದುಕೊಟ್ಟಂತಾಯಿತು. ಇದರ ಪರಿಣಾಮ ಭಾರತವನ್ನು ಬ್ರಿಟಿಷರು ಆಳಿದರು, ಆದರೆ ಆಡಳಿತವನ್ನು ಹಿಂದೂಗಳೇ ನಡೆಸಿದರು. ಈ ವಿಷಯವನ್ನು ದೃಢಪಡಿಸಿಕೊಳ್ಳಲು ಆಡಳಿತವರ್ಗದ ಸಂರಚನೆಗೆ ಕೆಲವೇ ಅಂಕಿ ಅಂಶಗಳನ್ನು ನೋಡಿದರೂ ಸಾಕು.

  ಭಾರತದ ರಾಜಧಾನಿಯಿಂದ ಹಳ್ಳಿಹಳ್ಳಿಯತನಕ ಇಡೀ ಯಂತ್ರದಲ್ಲಿ ಹಿಂದೂಗಳು ಜಾಗ ಹಿಡಿದುಕೊಂಡಿದ್ದಾರೆ. ಸರ್ವಾಂತರ್ಯಾಮಿ ಜಗನ್ನಿಯಾಮಕನಂತೆ ಆಡಳಿತ ಎಲ್ಲ ರೆಂಬೆಕೊಂಬೆಗಳಲ್ಲಿ ಚಾಚಿಕೊಂಡು ಎಲ್ಲ ಸಂದಿಗೊಂದಿಗಳಲ್ಲೂ ತಮ್ಮ ಹತೋಟಿ ಸ್ಥಾಪಿಸಿಕೊಂಡಿದ್ದಾರೆ. ಹಳೆಯ ವ್ಯವಸ್ಥೆಯನ್ನು ವಿರೋಧಿಸುವವರು ಅಪ್ಪಿತಪ್ಪಿಯೂ ನುಸುಳಲು ಅಲ್ಲಿ ಸ್ಥಳವಿಲ್ಲದಂತಾಗಿದೆ. ಅದು ಯಾವುದೇ ಇಲಾಖೆಯಾಗಿರಲಿ - ಕಂದಾಯ ಇಲಾಖೆಯಾಗಿರಲಿ, ಪೊಲೀಸ್ ಇಲಾಖೆಯಾಗಿರಲಿ, ನ್ಯಾಯಾಂಗ ಇಲಾಖೆಯಿರಲಿ-ಅದರ ಚಾಲಕರು ಹಿಂದೂಗಳು. ಸ್ಥಾಪಿತ ವ್ಯವಸ್ಥೆ ಇನ್ನೂ ತನ್ನ ಅಸ್ತಿತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರೆ ಅದಕ್ಕೆ ಕಾರಣ, ಸರಕಾರದ ಹಿಂದೂ ಅಧಿಕಾರಿವರ್ಗ ಪೂರ್ವವ್ಯವಸ್ಥೆಗೆ ಕೊಡುತ್ತಿರುವ ತಪ್ಪದಂಥ ಬೆಂಬಲ. ಹಿಂದೂ ಅಧಿಕಾರಿಗಳು ಯಾವುದೇ ವಿಷಯವನ್ನು ಜಾರಿಗೆ ತರುವಾಗ ಆ ವಿಷಯದ ಯೋಗ್ಯತೆಯನ್ನಷ್ಟೇ ಯೋಚಿಸುವುದಿಲ್ಲ, ಆ ವಿಷಯ ಯಾವ ವರ್ಗಕ್ಕೆ ಸಂಬಂಧಿಸಿದ್ದೆಂಬುದರ ಮೇಲೆ ಒಂದು ಕಣ್ಣಿಟ್ಟುಕೊಂಡೇ ನೋಡುತ್ತಾರೆ. ಅವರ ಮೂಲ ನಂಬಿಕೆ ಎಲ್ಲರಿಗೂ ಸಮಾನವಾದ ನ್ಯಾಯ ಎಂಬುದಲ್ಲ. ಅವರ ಗುರಿ- ಸ್ಥಾಪಿತ ವ್ಯವಸ್ಥೆಗೆ ಸಂಬದ್ಧವಾದಂತಹ ನ್ಯಾಯ. ಇದು ಅನಿವಾರ್ಯ. ಏಕೆಂದರೆ ಅವರು ಸಮಾಜದ ಬೇರೆ ಬೇರೆ ವರ್ಗಗಳನ್ನು ಸ್ಥಾಪಿತ ವ್ಯವಸ್ಥೆಯು ಹೇಗೆ ನೋಡಬೇಕೆನ್ನುತ್ತದೆಯೋ ಆ ಧೋರಣೆಯನ್ನು ತಮ್ಮೆಂದಿಗೆ ಆಡಳಿತದೊಳಕ್ಕೆ ತಂದಿರುತ್ತಾರೆ. ಆಡಳಿತ ಕ್ಷೇತ್ರದಲ್ಲಿ ಅಸ್ಪಶ್ಯರ ಬಗ್ಗೆ ಸರಕಾರಿ ಅಧಿಕಾರಿಗಳು ತೋರಿಸುವ ಧೋರಣೆಯನ್ನು ನೋಡಿದರೆ ಇದು ಚೆನ್ನಾಗಿ ತಿಳಿಯುತ್ತದೆ.

ಪ್ರತಿಯೊಬ್ಬ ಅಸ್ಪಶ್ಯನೂ ಸಾಕ್ಷಿಯಾಗಬಲ್ಲ. ಇಂತಹ ಹಲವಾರು ನಿದರ್ಶನಗಳಿವೆ. ಒಂದು ವೇಳೆ ಒಬ್ಬ ಅಸ್ಪಶ್ಯ ಜಾತಿಯವ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಒಂದು ದೂರು ದಾಖಲಿಸಲು ಪೊಲೀಸ್ ಅಧಿಕಾರಿಯ ಬಳಿ ಹೋದರೆ, ಆತನಿಗೆ ರಕ್ಷಣೆ ದೊರೆಯುವ ಬದಲು, ಹೇರಳ ಬೈಗುಳ ಸಿಗುತ್ತದೆ. ಆತನ ದೂರನ್ನು ದಾಖಲಿಸಿಕೊಳ್ಳದೆಯೇ ಆತನನ್ನು ಒದ್ದೋಡಿಸುತ್ತಾರೆ ಅಥವಾ ಒಮ್ಮೆ ದಾಖಲಿಸಿಕೊಂಡರೆ, ಸ್ಪಶ್ಯ ಆಕ್ರಮಣವಾದಿಗಳಿಗೆ ಬಚಾವಾಗಲು ಅವಕಾಶ ಸಿಗುವಂತೆ ತಪ್ಪಾಗಿ ದಾಖಲಿಸಿಕೊಳ್ಳುತ್ತಾರೆ. ಒಮ್ಮೆ ಆತ ತನ್ನ ಮೇಲೆ ಆಕ್ರಮಣ ನಡೆಸಿದವರನ್ನು ನ್ಯಾಯಾಲಯಕ್ಕೊಯ್ದರೆ ಆ ವ್ಯಾಜ್ಯದ ಗತಿ ಏನಾಗುತ್ತದೆಂದು ಮೊದಲೇ ಊಹಿಸಬಹುದು. ಅವರ ಪಕ್ಷ ಎಷ್ಟು ನ್ಯಾಯಯುತವಾಗಿದ್ದರೂ. ಅಸ್ಪಶ್ಯರನ್ನು ಬೆಂಬಲಿಸಬಾರದೆಂಬ ಹಳ್ಳಿಯ ಕುಟಿಲೋಪಾಯಗಳಿಂದ, ಅಸ್ಪಶ್ಯರಿಗೆ ಎಂದೂ ಹಿಂದೂಗಳು ಸಾಕ್ಷಿಯಾಗಿ ಬರುವುದಿಲ್ಲ. ಒಂದು ವೇಳೆ ಅವರು ಅಸ್ಪಶ್ಯ ಸಾಕ್ಷಿಗಳನ್ನು ತಂದರೆ ಅವರಿಗೆ ಈ ವ್ಯಾಜ್ಯದಲ್ಲಿ ಸ್ವಂತ ಆಸಕ್ತಿಯಿರುವುದರಿಂದ ಅವರು ಸ್ವತಂತ್ರ ಸಾಕ್ಷಿಗಳಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಧೀಶರ ಹೇಳಿಕೆಯನ್ನು ಸ್ವೀಕರಿಸುವುದಿಲ್ಲ. ಒಮ್ಮೆ ಸ್ವತಂತ್ರ ಸಾಕ್ಷಿಗಳು ಎಂದಾಗಲೂ ಕೂಡ, ನ್ಯಾಯಾಧೀಶ ಈ ಅಸ್ಪಶ್ಯರ ಹೇಳಿಕೆಗಳು ತನಗೆ ಸತ್ಯವಾದ ಸಾಕ್ಷಿಗಳೆಂದೆನಿಸುವುದಿಲ್ಲ ಎಂದು ಸೀದಾ ಹೇಳಿ ಸುಲಭವಾಗಿ ಆರೋಪಿಗಳನ್ನು ದೋಷಮುಕ್ತರಾಗಿಸಿ ಬಿಡಬಹುದು. ನ್ಯಾಯಾಧೀಶ ಇದನ್ನು ಧೈರ್ಯವಾಗಿ ಮಾಡಬಹುದು. ಏಕೆಂದರೆ, ಅವನಿಗೆ ಚೆನ್ನಾಗಿ ಗೊತ್ತಿದೆ - ಮೇಲಿನ ನ್ಯಾಯಾಲಯ ಅವನ ತೀರ್ಪನ್ನು ರದ್ದುಗೊಳಿಸುವುದಿಲ್ಲ. ಕಾರಣ, ಸುಪ್ರಸಿದ್ಧವಾದ ನಿಯಮವೊಂದರಂತೆ ಕೆಳನ್ಯಾಯಾಲಯದ ನ್ಯಾಯಾಧೀಶ ನೊಬ್ಬ ಕೊಟ್ಟ ಸಾಕ್ಷಗಳನ್ನಾಧರಿಸಿದ ತೀರ್ಪನ್ನು ಮೇಲ್ಮನವಿ ಸ್ವೀಕರಿಸುವ ನ್ಯಾಯಾಲಯ, ತನಗೆ ಸ್ವತಃ ಸಾಕ್ಷಿಗಳ ವರ್ತನೆಯನ್ನು ನೋಡುವ ಅವಕಾಶವಿಲ್ಲದಿರುವುದರಿಂದ ವ್ಯತ್ಯಸ್ತಗೊಳಿಸಬಾರದು - ಎಂಬುದಾಗಿದೆ.

ಅಂತಹ ಭೇದ ಪಕ್ಷಪಾತಗಳನ್ನು ತೋರಲಾಗುತ್ತಿದೆ ಎಂಬುದನ್ನು ಈಗ ಕಾಂಗ್ರೆಸಿಗರೂ ಕೂಡಾ ಒಪ್ಪಿಕೊಳ್ಳತೊಡಗಿದ್ದಾರೆ. ತಮಿಳುನಾಡಿನ ಹರಿಜನ ಸೇವಕ ಸಂಘ ಸೆಪ್ಟಂಬರ್ 30, 1937ಕ್ಕೆ ಮುಗಿಯುವ ವರ್ಷದ ತನ್ನ ವಾರ್ಷಿಕ ವರದಿಯಲ್ಲಿ ಹೀಗೆ ಹೇಳಿದೆ.

‘‘ತಮ್ಮ ಹಕ್ಕುಗಳ ಬಗ್ಗೆ ಎಚ್ಚೆತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸಿಕೊಂಡಿರುವ ಮೂಲೆಯ ಕುಗ್ರಾಮಗಳ ಹರಿಜನರು, ಪೊಲೀಸು ಪೇದೆಯೇ ಅಲ್ಲಿಯ ಸಮಸ್ತ ಆಡಳಿತಗಾರನೂ ಆಗಿರುವಂಥ ಕುಗ್ರಾಮಗಳ ಹರಿಜನರು, ಯಾವತ್ತೂ ತಮ್ಮ ಹಕ್ಕುಗಳ ಬಗ್ಗೆ ಹೋರಾಡುವಂತಿಲ್ಲ. ಕಾರಣ, ಅವರು ತಮ್ಮ ಹಕ್ಕುಗಳನ್ನು ಸ್ಥಾಪಿಸ ಹೊರಟರೆ ಅದು ಅವರಿಗೂ ಮತ್ತು ಜಾತಿವಾದಿಗಳಿಗೂ ನಡುವಿನ ವ್ಯಾಜ್ಯಕ್ಕೆ ಎಡೆಮಾಡಿಕೊಡುತ್ತದೆ. ಮತ್ತು ಅಂತಹ ವ್ಯಾಜ್ಯಗಳಲ್ಲಿ ಸಾಧಾರಣವಾಗಿ ಜಾತಿವಾದಿಗಳ ಕೈಯೇ ಮೇಲಾಗುತ್ತದೆ. ಹೀಗಾದಾಗ ಸಹಜವಾಗಿ ಇಂತಹ ಜಗಳಗಳು ಪೊಲೀಸರ ಬಳಿ ಅಥವಾ ನ್ಯಾಯಾಧೀಶರ ಬಳಿ ಹೋಗುತ್ತವೆ. ನ್ಯಾಯಾಧೀಶರ ಬಳಿ ಹೋಗುವುದು ಹರಿಜನರ ಕೈಮೀರಿದ ವಿಷಯ ಮತ್ತು ಪೊಲೀಸರ ಬಳಿ ಹೋದರೆ ಅದು ನಿರರ್ಥಕ ಎನ್ನುವುದಕ್ಕಿಂತ ಕೇಡು ಆಗುತ್ತದೆ. ಹಲವು ನಿದರ್ಶನಗಳಲ್ಲಿ, ದೂರಿನ ಬಗ್ಗೆ ವಿಚಾರಣೆಯನ್ನೇ ನಡೆಸುವುದಿಲ್ಲ ಮತ್ತು ಹಲವು ಬಾರಿ ಜಾತೀಯರಿಗೆ ಪರವಾದಂತಹ ತೀರ್ಮಾನಗಳನ್ನೇ ಕೊಡಲಾಗುತ್ತದೆ. ನಾವು ಪೊಲೀಸರಿಗೆ ನೀಡಿದ ದೂರಿಗೂ ಇದೇ ಗತಿ ಒದಗಿದೆ. ನಮಗನಿಸುವಂತೆ ಇಲ್ಲಿರುವ ಸಮಸ್ಯೆಯೆಂದರೆ ಕೆಳಸ್ತರದ ಪೊಲೀಸರ ಮನೋಭಾವದಲ್ಲಿ ಯಾವ ಬದಲಾವಣೆಯೂ ಆಗದಿರುವುದು. ಒಂದು, ಆತನಿಗೆ ಹರಿಜನರಿಗಿರುವ ಹಕ್ಕುಗಳ ಬಗ್ಗೆ ಹಾಗೂ ಅವರಿಗೆ ತಾನು ರಕ್ಷಣೆಯೊದಗಿಸಬೇಕೆಂಬ ಬಗ್ಗೆ ತಿಳಿದೇ ಇರುವುದಿಲ್ಲ ಅಥವಾ ಆತ ಜಾತೀಯ ಜನಗಳಿಂದ ಪ್ರಭಾವಿತನಾಗಿರುತ್ತಾನೆ ಅಥವಾ ಆತ ಈ ವಿಷಯದಲ್ಲಿ ಸಂಪೂರ್ಣ ಅನಾಸಕ್ತಿ ತೋರಿಸುತ್ತಾನೆ ಎಂದೂ ಹೇಳಬಹುದು. ಇನ್ನೂ ಕೆಲವು ನಿದರ್ಶನಗಳಲ್ಲಿ, ಭ್ರಷ್ಟಾಚಾರದ ಕಾರಣದಿಂದಾಗಿ ಆತ ಶ್ರೀಮಂತ ಜಾತಿವಾದಿಗಳ ಪಕ್ಷ ವಹಿಸುತ್ತಾನೆ.’’ ಹಿಂದೂ ಅಧಿಕಾರಿ ಹೇಗೆ ಅಸ್ಪಶ್ಯ ವಿರೋಧಿ ಮತ್ತು ಹಿಂದೂಗಳ ಪರ ಎಂಬುದನ್ನು ಇದು ತೋರಿಸುತ್ತದೆ. ಯಾವುದೇ ವಿಷಯ ಅವನ ಅಧಿಕಾರ ಅಥವಾ ವಿವೇಚನೆಗೆ ಬಿಡಲ್ಪಟ್ಟರೆ ಆತ ಅದನ್ನು ಅಸ್ಪಶ್ಯ ವಿರೋಧಿ ಪಕ್ಷಪಾತದಿಂದಲೇ ನಿರ್ಧರಿಸುತ್ತಾನೆ.

ಪೊಲೀಸರು ಮತ್ತು ನ್ಯಾಯಾಧೀಶರು ಕೆಲವೊಮ್ಮೆ ಭ್ರಷ್ಟರಾಗಿರು ತ್ತಾರೆ. ಅವರು ಭ್ರಷ್ಟರಷ್ಟೇ ಆಗಿದ್ದರೆ ಅಸ್ಪಶ್ಯರಿಗೆ ಅದೇನೂ ಕೆಡುಕಾಗುತ್ತಿರಲಿಲ್ಲ. ಏಕೆಂದರೆ ಭ್ರಷ್ಟ ಅಧಿಕಾರಿಯನ್ನು ಯಾವ ಪಕ್ಷದವರೂ ಕೊಂಡುಕೊಳ್ಳಬಹುದು. ದುರ್ದೈವವೆಂದರೆ, ಪೊಲೀಸರು ಮತ್ತು ನ್ಯಾಯಾಧೀಶರು ಭ್ರಷ್ಟರಾಗಿರುವುದಕ್ಕಿಂತ ಹೆಚ್ಚು ಪಕ್ಷಪಾತಿಗಳಾಗಿರುತ್ತಾರೆ. ಅವರ ಈ ಹಿಂದೂ ಪಕ್ಷಪಾತ ಮತ್ತು ಅಸ್ಪಶ್ಯರ ಬಗ್ಗೆ ಅನುಕಂಪಹೀನತೆಗಳಿಂದಾಗಿ ಅಸ್ಪಶ್ಯರಿಗೆ ನ್ಯಾಯ ಮತ್ತು ರಕ್ಷಣೆಗಳೆರಡೂ ದೊರಕುವುದಿಲ್ಲ. ಒಬ್ಬನ ಬಗ್ಗೆ ಪಕ್ಷಪಾತ, ಇನ್ನೊಬ್ಬನ ಬಗ್ಗೆ ಅನುಕಂಪಹೀನತೆ -ಈ ರೋಗಕ್ಕೆ ಯಾವುದೇ ಮದ್ದಿಲ್ಲ. ಕಾರಣ, ಇದು ಸಾಮಾಜಿಕ ಮತ್ತು ಧಾರ್ಮಿಕ ದ್ವೇಷದಲ್ಲಿಯೇ ಕಾಣುತ್ತದೆ. ಪೊಲೀಸರು ಮತ್ತು ನ್ಯಾಯಾಧೀಶರು, ತಮ್ಮ ಮೂಲೋದ್ದೇಶಗಳ ಕಾರಣದಿಂದ, ತಮ್ಮ ಆಸಕ್ತಿಯ ಕಾರಣದಿಂದ ತಮ್ಮ ವಂಶವಾಹಿಯ ಕಾರಣದಿಂದ ಅಸ್ಪಶ್ಯರ ಜೀವಶಕ್ತಿಯನ್ನು ಅನುಕಂಪದಿಂದ ಗುರುತಿಸದೇ ಹೋಗುತ್ತಾರೆ. ಅಸ್ಪಶ್ಯರನ್ನು ಪ್ರಚೋದಿಸುವ ಬಯಕೆಗಳು, ನೋವುಗಳು, ಹಂಬಲಗಳು ಮತ್ತು ಆಕಾಂಕ್ಷೆಗಳು ಅವರನ್ನು ಮುಟ್ಟುವುದೇ ಇಲ್ಲ. ಪರಿಣಾಮವಾಗಿ ಅವರು ಅಸ್ಪಶ್ಯರ ಎಲ್ಲ ಕನಸುಗಳಿಗೆ ನೇರವಾದ ವಿರೋಧಿಗಳೂ ಪ್ರತಿಕೂಲರೂ ಆಗುತ್ತಾರೆ. ಅಸ್ಪಶ್ಯರನ್ನವರು ಮುಂದುವರಿಯಲು ಬಿಡುವುದಿಲ್ಲ. ಅವರ ಬೇಡಿಕೆಗಳನ್ನು ಗಮನಿಸುವುದಿಲ್ಲ ಮತ್ತು ಯಾವುದೇ ವಿಷಯದಲ್ಲಿ ಅಸ್ಪಶ್ಯರ ಆತ್ಮಗೌರವ ಮತ್ತು ಹೆಗ್ಗಳಿಕೆಗಳ ವಾಸನೆ ಬಂದರೂ ತಟ್ಟನೆ ಅದನ್ನು ಹೊಸಕಿಹಾಕುತ್ತಾರೆ. ಇನ್ನೊಂದು ಕಡೆಯಿಂದ, ಅವರು ಹಿಂದೂ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಸ್ಪಶ್ಯರ ಎದುರು ಹಿಂದೂಗಳು ತಮ್ಮ ಶಕ್ತಿ, ಅಧಿಕಾರ, ಘನತೆ, ಗಾಂಭೀರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಇವರು ಸಹಾಯ ಮಾಡುತ್ತಾರೆ. ಈ ಎರಡು ವರ್ಗದ ನಡುವಣ ಯಾವುದೇ ವ್ಯಾಜ್ಯದಲ್ಲಿ ಇವರು ಹಿಂದೂಗಳ ದಲ್ಲಾಳಿಗಳೆಂಬಂತೆ ಕೆಲಸ ಮಾಡಿ ಅಸ್ಪಶ್ಯರ ಬಂಡಾಯವನ್ನು ಹತ್ತಿಕ್ಕುತ್ತಾರೆ ಮತ್ತು ಒಳಿತೋ ಕೆಡುಕೋ ಸಾಧ್ಯವಿರುವ ಎಲ್ಲ ಸಾಧನಗಳನ್ನು ಬಳಸಿ, ‘‘ಅಸ್ಪಶ್ಯರಿಗೆ ಒಂದು ಪಾಠ ಕಲಿಸಬೇಕು, ಅವರನ್ನು ಅವರ ಸ್ಥಾನದಲ್ಲೇ ಇರುವಂತೆ ಮಾಡಬೇಕು’’ ಎಂದು ಹಿಂದೂ ದುಷ್ಟ ಕೂಟದಲ್ಲಿ ಕಣ್ಣಿಗೆ ಕಾಣುವಂತೆ ಯಾವುದೇ ನಾಚಿಕೆಯಿಲ್ಲದೆ ಶಾಮೀಲಾಗುತ್ತಾರೆ.

ಈ ಎಲ್ಲ ಅನ್ಯಾಯಗಳನ್ನೂ ದಂಡನೆಗಳನ್ನೂ ಕಾನೂನಿನ ಪರಿಧಿಯಲ್ಲೇ ನಡೆಸಬಹುದೆಂಬುದು ಎಲ್ಲಕ್ಕಿಂತ ಹೀನವಾದ ಸಂಗತಿ. ಒಬ್ಬ ಹಿಂದೂ ಅಸ್ಪಶ್ಯನನ್ನು ತಾನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಅವನಿಗೆ ಏನನ್ನೂ ಮಾರುವುದಿಲ್ಲ. ಅವನ ಜಾನುವಾರುಗಳನ್ನು ತನ್ನ ಹೊಲದ ಮೂಲಕ ಹಾದುಹೋಗಲು ಬಿಡುವುದಿಲ್ಲ ಎನ್ನಬಹುದು-ಇಷ್ಟೆಲ್ಲ ಮಾಡಿಯೂ ಆತ ಕಾನೂನನ್ನು ಕಿಂಚಿತ್ತೂ ಮುರಿಯು ವುದಿಲ್ಲ. ಆತ ತನ್ನ ಹಕ್ಕುಗಳನ್ನು ಅಭಿವ್ಯಕ್ತಿಸುತ್ತಾನೆ, ಅಷ್ಟೇ. ಈ ಕೆಲಸಗಳನ್ನು ಹಿಂದೂ ಯಾವ ಉದ್ದೇಶದಿಂದ ಮಾಡಿದ ಎಂಬ ಬಗ್ಗೆ ಕಾನೂನು ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ಅಸ್ಪಶ್ಯನಿಗೆ ಆಗುವ ನೋವು ಎಂಥದು ಎಂಬ ಬಗ್ಗೆ ಕಾನೂನು ಚಿಂತಿಸುವುದಿಲ್ಲ. ಪೊಲೀಸರೂ ಹಾಗೆಯೇ. ಅವರು ತಮ್ಮ ಅಧಿಕಾರದ, ಶಕ್ತಿಯ ದುರ್ಬಳಕೆ ಮಾಡಬಹುದು, ಹೇಳಿದ್ದನ್ನು ಬರೆದುಕೊಳ್ಳದೆ ಅಥವಾ ಹೇಳಿದ್ದಕ್ಕಿಂತ ಬೇರೆಯಾದದ್ದನ್ನು ಬರೆದುಕೊಂಡು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಬಹುದು, ತಮಗೆ ಬೇಕಾದ ಪಕ್ಷಕ್ಕೆ ಎದುರು ಸಾಕ್ಷಿಗಳ ಹೇಳಿಕೆಯನ್ನು ತೋರಿಸಬಹುದು, ಬಂಧಿಸಲು ನಿರಾಕರಿಸಬಹುದು - ಹೀಗೆ ನೂರಾರು ವಿಧಾನಗಳ ಮೂಲಕ ಆ ಮೊಕದ್ದಮೆಯನ್ನು ಹಾಳು ಮಾಡಬಹುದು. ಆದರೆ, ಇಷ್ಟು ಮಾಡಿಯೂ ಪೊಲೀಸರು ಸಿಕ್ಕಿಬೀಳದೆ ಇರಲು ಸಾಧ್ಯ. ಏಕೆಂದರೆ ಕಾನೂನಿನಲ್ಲಿ ಹಲವು ಒಳದಾರಿಗಳಿವೆ ಮತ್ತು ಅವೆಲ್ಲವೂ ಪೊಲೀಸರಿಗೆ ಗೊತ್ತಿವೆ. ನ್ಯಾಯಾಧೀಶ ಅವರ ಮೇಲೆ ಭಾರೀ ನಂಬಿಕೆಯನ್ನು ಇಟ್ಟಿದ್ದಾನೆ. ವಿವೇಚನೆಗೆ ಅವಕಾಶ ಕೊಟ್ಟಿದ್ದಾನೆ. ಅದನ್ನು ಬಳಸಿಕೊಳ್ಳಲು ಪೊಲೀಸರು ಸ್ವತಂತ್ರರು. ಒಂದು ಮೊಕದ್ದಮೆಯ ತೀರ್ಮಾನ ಆ ಮೊಕದ್ದಮೆಯಲ್ಲಿ ಸಾಕ್ಷಿ ಹೇಳಬಲ್ಲ ಸಾಕ್ಷಿಗಳ ಮೇಲೆ ನಿಂತಿರುತ್ತದೆ. ಆದರೆ ಜೊತೆಗೆ ಆ ಸಾಕ್ಷಿಗಳು ನಂಬಿಕೆಗೆ ಅರ್ಹರೋ ಅಲ್ಲವೋ ಎಂಬ ತೀರ್ಮಾನದ ಮೇಲೂ ಅವಲಂಬಿಸಿರುತ್ತದೆ. ನ್ಯಾಯಾಧೀಶ ಯಾವುದೇ ಪಕ್ಷವನ್ನು ನಂಬಬಹುದು, ಇನ್ನೊಂದನ್ನು ನಂಬದೇ ಹೋಗಬಹುದು. ಅಕಾರಣವಾಗಿ, ಸ್ವೇಚ್ಛೆಯಾಗಿ ಆತ ಹೀಗೆ ಒಂದು ಪಕ್ಷವನ್ನು ನಂಬಬಹುದು. ಆದರೆ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದು ನ್ಯಾಯಾಧೀಶರ ವಿವೇಚನೆ. ಅಸಂಖ್ಯ ಮೊಕದ್ದಮೆಗಳಲ್ಲಿ ನ್ಯಾಯಾಧೀಶರು ತಮ್ಮ ಈ ವಿವೇಚನೆಯ ಅಧಿಕಾರವನ್ನು ಅಸ್ಪಶ್ಯರ ವಿರುದ್ಧ್ದವಾಗಿ ಚಲಾಯಿಸಿದ್ದಾರೆ. ಅಸ್ಪಶ್ಯರ ಸಾಕ್ಷಿ ಎಷ್ಟೇ ಸತ್ಯವಾದದ್ದಾಗಿರಲಿ, ನ್ಯಾಯಾಧೀಶರು ‘‘ನಾನು ಈ ಸಾಕ್ಷಿಯನ್ನು ನಂಬುವುದಿಲ್ಲ’’ ಎಂಬ ಒಂದೇ ಪರಿಚಿತ ಸಾಲಿನಲ್ಲಿ ನಿವಾರಿಸಬಹುದು ಹಾಗೂ ಯಾರಿಗೂ ಅದನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಯಾವ ಶಿಕ್ಷೆ ನೀಡಬೇಕೆಂಬ ವಿಷಯದಲ್ಲೂ ಕೂಡಾ ನ್ಯಾಯಾಧೀಶರ ವಿವೇಚನೆಗೆ ಅವಕಾಶವಿರುತ್ತದೆ. ಕೆಲವು ಶಿಕ್ಷೆಗಳಿಗೆ ಮೇಲ್ಮನವಿ ಮಾಡಿಕೊಳ್ಳುವುದು ಪರಿಹಾರ ಪಡೆಯುವ ಒಂದು ಮಾರ್ಗ. ಆದರೆ ನ್ಯಾಯಾಧೀಶರು ಮೇಲ್ಮನವಿಗೆ ಅವಕಾಶವಿಲ್ಲದ ಶಿಕ್ಷೆ ಕೊಡುವ ಮೂಲಕ ಈ ಮಾರ್ಗವನ್ನು ಮುಚ್ಚಿಬಿಡಬಹುದು.

ಸ್ಥಾಪಿತ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಹಿಂದೂ ಸಮಾಜ ಎಷ್ಟು ಭಾಗಿಯೋ ಅಷ್ಟೇ ಹಿಂದೂ ಅಧಿಕಾರಿಯೂ ಭಾಗಿ. ಈ ಇಬ್ಬರೂ ಕೂಡಿ ಈ ಸ್ಥಾಪಿತ ವ್ಯವಸ್ಥೆಯನ್ನು ಅವಿಚ್ಛಿನ್ನವಾಗುವಂತೆ ಮಾಡಿಬಿಟ್ಟಿದ್ದಾರೆ. (ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)                 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News