ಯೋಗವು ಶರೀರಕ್ಕಾಗಿ, ಪ್ರಧಾನಿ ಮೋದಿಗಾಗಿ ಅಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2019-06-21 14:04 GMT
ಫೋಟೊ ಕೃಪೆ ANI

ಹೊಸದಿಲ್ಲಿ,ಜೂ.21: ಯೋಗವು ಸರಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವಲ್ಲ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಮತ್ತು ಅವರು ತಮ್ಮ ಆರೋಗ್ಯಕ್ಕಾಗಿ ಯೋಗವನ್ನು ಮಾಡಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶುಕ್ರವಾರ ಇಲ್ಲಿ ಹೇಳಿದರು.

ಅಂತರರಾಷ್ಟ್ರಿಯ ಯೋಗ ದಿನದ ಅಂಗವಾಗಿ ಆಯುಷ್ ಸಚಿವಾಲಯ ಮತ್ತು ಬ್ರಹ್ಮಕುಮಾರಿಯರು ಇಲ್ಲಿಯ ಕೆಂಪುಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಯ್ಡು,ಯೋಗವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಶಿಫಾರಸು ಮಾಡಿದರು.

ಯೋಗವನ್ನು ಜನತಾ ಆಂದೋಲನವನ್ನಾಗಿ ಮಾಡುವಂತೆ ಪ್ರತಿಯೊಬ್ಬರನ್ನೂ ಕೋರಿಕೊಂಡ ಅವರು,ಜನರು ತಮ್ಮ ದೈನಂದಿನ ಬದುಕಿನ ಭಾರೀ ಒತ್ತಡವನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ಕೇವಲ ದೈಹಿಕ ಆರೋಗ್ಯಕ್ಕಾಗಿ ಮಾತ್ರವಲ್ಲ,ಉತ್ತಮ ಬದುಕನ್ನು ಸಾಗಿಸಲು ಪ್ರತಿಯೊಬ್ಬರೂ ಯೋಗವನ್ನು ಬಳಸಬಹುದಾಗಿದೆ ಎಂದರು.

ಬಹುಶಃ ಐದನೇ ಶತಮಾನದಲ್ಲಿ ಭಾರತದಲ್ಲಿ ಆರಂಭಗೊಂಡ ಯೋಗವು ಪ್ರಾಚೀನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಆಧ್ಯಾತ್ಮಿಕ ಪದ್ಧತಿಯಾಗಿದೆ. ಯೋಗವು ದೈಹಿಕ ಕ್ಷಮತೆ ಮತ್ತು ಮಾನಸಿಕ ಸಮತೋಲನ ನೀಡುವ ಜೊತೆಗೆ ಶಿಸ್ತನ್ನೂ ಮೈಗೂಡಿಸುವುದರಿಂದ ಅದನ್ನು ಶಾಲಾ ಪಠ್ಯಕ್ರಮದ ಭಾಗವನ್ನಾಗಿಸುವ ಮೂಲಕ ಪ್ರಸಾರಿಸುವ ಮತ್ತು ಸಂರಕ್ಷಿಸುವ ಅಗತ್ಯವಿದೆ ಎಂದರು.

‘‘ಬದಲಾಗುತ್ತಿರುವ ಜೀವನಶೈಲಿಗಳು ಮತ್ತು ದೇಶಾದ್ಯಂತ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೋಗವು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ. ನಾವು ನಮ್ಮ ಹಳೆಯ ಜೀವನ ವಿಧಾನಗಳಿಗೆ ಮರಳುವ ಕಾಲವೀಗ ಬಂದಿದೆ. ಈ ಜೀವನಶೈಲಿ ಬದಲಾವಣೆಗಳು ನಮ್ಮ ಯುವಪೀಳಿಗೆಗೆ ಹಾನಿಯನ್ನುಂಟು ಮಾಡುತ್ತಿವೆ. ದೈಹಿಕ ಚಟುವಟಿಕೆಗಳು,ಆಧ್ಯಾತ್ಮಿಕ ಚಟುವಟಿಕೆಗಳು ಈಗಿನ ಪೀಳಿಗೆಯಲ್ಲಿ ಕಂಡು ಬರುತ್ತಿಲ್ಲ. ನಾವೆಲ್ಲ ಶ್ರೀಮಂತಿಕೆ ಮತ್ತು ತಾತ್ಕಾಲಿಕ ಸಂತೋಷಕ್ಕಾಗಿ ಹಾತೊರೆಯುತ್ತಿದ್ದೇವೆ ’’ ಎಂದರು.

ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಮಾರುಹೋಗದಂತೆ ಯುವಜನರಿಗೆ ಕಿವಿಮಾತು ಹೇಳಿದ ಅವರು,ಇವು ನಿರಂತರ ಕಾಯಿಲೆಗಳನ್ನುಂಟು ಮಾಡುತ್ತವೆ. ನಮ್ಮ ಪೂರ್ವಜರು ಆಯಾ ಋತುಮಾನ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಉತ್ತಮ ಆಹಾರ ಪದ್ಧತಿಗಳನ್ನು ನೀಡಿದ್ದಾರೆ. ನಾವು ನಮ್ಮ ಹಳೆಯ ಆಹಾರ ಪದ್ಧತಿಗಳಿಗೆ ಮರಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News