ಪ್ರಧಾನಿ ಮೋದಿ ಭೇಟಿಯ ಬಳಿಕ ಬದಲಾಯಿತು ಕೇಜ್ರಿವಾಲ್ ಮಾತಿನ ಧಾಟಿ!

Update: 2019-06-21 15:06 GMT

ಹೊಸದಿಲ್ಲಿ,ಜೂ.21: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಾರ್ವತ್ರಿಕ ಚುನಾವಣೆಗಳ ಬಳಿಕ ಮೊದಲ ಬಾರಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನಲ್ಲಿ ಭೇಟಿಯಾಗಿ ಕೇಂದ್ರದೊಂದಿಗೆ ಸಹಕರಿಸುವ ಭರವಸೆ ನೀಡಿದರಲ್ಲದೆ,ದಿಲ್ಲಿ ನಗರದ ಅಭಿವೃದ್ಧಿಗೆ ನೆರವನ್ನು ಕೋರಿದರು.

 ಲಾಗಾಯ್ತಿನಿಂದಲೂ ರಾಜಕೀಯವಾಗಿ ಮೋದಿಯವರನ್ನು ವಿರೋಧಿಸಿಕೊಂಡೇ ಬಂದಿರುವ ಕೇಜ್ರಿವಾಲ್ ಈ ಭೇಟಿಯ ಬಳಿಕ ತನ್ನ ಎಂದಿನ ವರಸೆಯನ್ನು ಬಿಟ್ಟು ಸೌಹಾರ್ದದ ಧಾಟಿಯಲ್ಲಿ ಮಾತನಾಡಿದ್ದು, ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿದೆ. ಇತ್ತೀಚಿಗೆ ಅಂತ್ಯಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ದಿಲ್ಲಿಯ ಎಲ್ಲ ಏಳೂ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಯನ್ನು ಹೊಸಕಿಹಾಕಿತ್ತು.

ನರೇಂದ್ರ ಮೋದಿಯವರನ್ನು ಭೇಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ವಿಜಯಕ್ಕಾಗಿ ಅಭಿನಂದಿಸಿದ್ದೇನೆ ಎಂದು ತಿಳಿಸಿದ ಕೇಜ್ರಿವಾಲ್,ಮಳೆಗಾಲದಲ್ಲಿ ಯಮುನಾ ನದಿ ನೀರಿನ ಕೊಯ್ಲಿಗೆ ಕೇಂದ್ರದ ಬೆಂಬಲವನ್ನು ಕೋರಿದ್ದೇನೆ ಎಂದರು. ದಿಲ್ಲಿ ಸರಕಾರದ ಪ್ರಶಂಸನೀಯ ಆರೋಗ್ಯ ನೀತಿಯ ಅಂಗವಾಗಿರುವ ‘ಮೊಹಲ್ಲಾ ಕ್ಲಿನಿಕ್’ಗೆ ಭೇಟಿ ನೀಡುವಂತೆ ತಾನು ಪ್ರಧಾನಿಯವರನ್ನು ಆಹ್ವಾನಿಸಿರುವುದಾಗಿಯೂ ತಿಳಿಸಿದರು.

‘‘ ಭೇಟಿಯ ವೇಳೆ ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ ಸಂಕ್ಷಿಪ್ತ ಚರ್ಚೆ ನಡೆಯಿತು. ದಿಲ್ಲಿ ಸರಕಾರದ ಆರೋಗ್ಯ ಯೋಜನೆ ಅದಕ್ಕಿಂತ ದೊಡ್ಡದು ಮತ್ತು ವಿಶಾಲವಾಗಿದೆ ಎಂಬ ಮಾಹಿತಿಯನ್ನು ಮೋದಿಯವರಿಗೆ ನೀಡಿದ್ದೇನೆ. ನಮ್ಮ ಯೋಜನೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನೂ ಅಡಕಗೊಳಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ” ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News