ರಾಜ್ಯಸಭೆಯಲ್ಲಿ 5 ವರ್ಷಗಳಿಂದ ಬಾಕಿಯಿರುವ ಮಸೂದೆಗಳನ್ನು ವಜಾಗೊಳಿಸಬೇಕು: ವೆಂಕಯ್ಯ ನಾಯ್ಡು

Update: 2019-06-21 15:12 GMT

ಹೊಸದಿಲ್ಲಿ, ಜೂ.21: ರಾಜ್ಯಸಭೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಸಮಯದಿಂದ ಬಾಕಿಯುಳಿದಿರುವ ಮಸೂದೆಗಳನ್ನು ವಜಾಗೊಳಿಸಬೇಕೆಂದು ರಾಜ್ಯಸಭಾ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಶುಕ್ರವಾರ ಸಲಹೆ ನೀಡಿದ್ದಾರೆ.

 ಸಂಸತ್‌ನಲ್ಲಿ ಗದ್ದಲದಿಂದ ಉಂಟಾಗುತ್ತಿರುವ ಸಮಯದ ನಷ್ಟದ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ನಾಯ್ಡು, ಈ ನಿಷ್ಕ್ರಿಯ ಮತ್ತು ಗದ್ದಲದ ವಾತಾವರಣ ಬದಲಾಗಬೇಕಿದೆ ಎಂದು ತಿಳಿಸಿದ್ದಾರೆ. ನಿರಂತರ ಗದ್ದಲದಿಂದ ಮಸೂದೆಗಳು ಅಂಗೀಕಾರಗೊಳ್ಳದೆ ಉಳಿಯುತ್ತವೆ ಇದರಿಂದ ಸಮಯದ ನಷ್ಟ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಮೇ ತಿಂಗಳಲ್ಲಿ ಲೋಕಸಭೆ ವಿಸರ್ಜನೆಯಾದ ಪರಿಣಾಮ ಬಾಕಿಯುಳಿದಿದ್ದ 22 ಮಸೂದೆಗಳು ರಾಜ್ಯಸಭೆಯಲ್ಲಿ ವಜಾಗೊಂಡಿವೆ ಎಂದು ನಾಯ್ಡು ತಿಳಿಸಿದ್ದಾರೆ.

ಸಂವಿಧಾನದ 107ನೇ ವಿಧಿಯ ಪ್ರಕಾರ, ಲೋಕಸಭೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಮಂಜೂರುಗೊಳ್ಳುವ ಮಸೂದೆಗಳು ರಾಜ್ಯ ಸಭೆಯಲ್ಲಿ ಬಾಕಿಯುಳಿದಿದ್ದರೆ ಲೋಕಸಭೆ ವಿಸರ್ಜನೆಯಾದಾಗ ವಜಾಗೊಳ್ಳುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ. ಸದ್ಯ ಈ 22 ಮಸೂದೆಗಳನ್ನು ಲೋಕಸಭೆಯಲ್ಲಿ ಮತ್ತೊಮ್ಮೆ ಮಂಡಿಸಬೇಕಿದೆ. ಹೀಗೆ ಮಾಡಲು ಕನಿಷ್ಟ ಎರಡು ಅಧಿವೇಶನಗಳು ಬೇಕಾಗಬಹುದು ಎನ್ನುವುದು ನನ್ನ ಅನುಮಾನ. ಅದರರ್ಥ ಈ 22 ಮಸೂದೆಗಳನ್ನು ಜಾರಿ ಮಾಡಲು ಲೋಕಸಭೆಯಲ್ಲಿ ನಡೆಯುವ ಪ್ರಯತ್ನಗಳು ಫಲಹೀನವಾಗುತ್ತದೆ ಎಂದು ನಾಯ್ಡು ಖೇದ ವ್ಯಕ್ತಪಡಿಸಿದ್ದಾರೆ.

 ಜಮೀನು ಸ್ವಾಧೀನ ಮಸೂದೆ, ತ್ರಿವಳಿ ತಲಾಕ್ ಮಸೂದೆ, ಆಧಾರ್ ತಿದ್ದುಪಡಿ ಕಾನೂನು ಮತ್ತು ಮೋಟಾರು ವಾಹನ ಕಾಯ್ದೆ ಇವುಗಳು ಬಾಕಿಯುಳಿದಿರುವ ಕೆಲವು ಪ್ರಮುಖ ಮಸೂದೆಗಳಾಗಿವೆ. ಕಳೆದ ರಾಜ್ಯಸಭಾ ಅಧಿವೇಶನ ಮುಕ್ತಾಯಗೊಳ್ಳುವ ಹೊತ್ತಿಗೆ 55 ಮಸೂದೆಗಳು ಬಾಕಿಯುಳಿದಿದ್ದವು ಮತ್ತೀಗ ಈ ಸಂಖ್ಯೆ 33ಕ್ಕೆ ಇಳಿದಿದೆ. ಅದರಲ್ಲೂ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆ, 1987, 32 ವರ್ಷಗಳಿಂದ ಬಾಕಿಯುಳಿದಿದೆ. ಮೂರು ಮಸೂದೆಗಳು 20 ವರ್ಷಕ್ಕೂ ಹೆಚ್ಚು ಸಮಯದಿಂದ ಬಾಕಿಯಿವೆ, ಆರು ಮಸೂದೆಗಳು 10ರಿಂದ 20 ವರ್ಷ, 14 ಮಸೂದೆಗಳು ಕಳೆದ ಐದರಿಂದ 10 ವರ್ಷಗಳಿಂದ ಮತ್ತು ಕೇವಲ 10 ಮಸೂದೆಗಳು ಕಳೆದ ಐದು ವರ್ಷಗಳಿಂದ ರಾಜ್ಯಸಭೆಯಲ್ಲಿ ಬಾಕಿಯುಳಿದಿವೆ ಎಂದು ನಾಯ್ಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News