ಅಧಿಕೃತ ಎಚ್ಚರಿಕೆ ಕಳುಹಿಸುವುದನ್ನು ನಿಲ್ಲಿಸುವವರೆಗೆ ಕೇಂದ್ರದ ಸಭೆಗಳನ್ನು ಬಹಿಷ್ಕರಿಸಲು ಟಿಎಂಸಿ ನಿರ್ಧಾರ

Update: 2019-06-21 15:18 GMT

ಕೋಲ್ಕತಾ, ಜೂ.21: ಸಂವಿಧಾನದ 355ನೇ ವಿಧಿಯಡಿ ರಾಜ್ಯಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಎಚ್ಚರಿಕೆಗಳನ್ನು ಕಳುಹಿಸುವುದನ್ನು ನಿಲ್ಲಿಸುವವರೆಗೆ ಕೇಂದ್ರ ಸರಕಾರ ಕರೆಯುವ ಯಾವುದೇ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಶುಕ್ರವಾರ ತಿಳಿಸಿದೆ.

 ಮಮತಾ ಬ್ಯಾನರ್ಜಿ ಸರಕಾರಕ್ಕೆ ಕೇಂದ್ರ ಕಳೆದ ವಾರ ಎರಡು ಬಾರಿ ಎಚ್ಚರಿಕೆಗಳನ್ನು ರವಾನಿಸಿದೆ ಎಂದು ಟಿಎಂಸಿ ಸಂಸದ ಸೌಗತ ರಾಯ್ ತಿಳಿಸಿದ್ದಾರೆ. ಹಾಗಾಗಿ, ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಚರ್ಚಿಸಲು ಕೇಂದ್ರ ಕರೆದಿದ್ದ ಸಭೆಯನ್ನು ನಾವು ಬಹಿಷ್ಕರಿಸಿದ್ದೆವು. ಮುಂದೆಯೂ ಕೇಂದ್ರದ ನಡೆ ಸರಿಯಾಗುವವರೆಗೆ ನಾವು ಯಾವುದೇ ಸಭೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

 ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ಗೃಹ ವ್ಯವಹಾರಗಳ ಸಚಿವಾಲಯ ಜೂನೆಎ 15ರಂದು ಸೂಚಿಸಿತ್ತು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 160 ಮಂದಿ ಬಲಿಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿತ್ತು. ಜೂನ್ 19ರಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಎಲ್ಲ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News