ಕಲ್ಲಿದ್ದಲು ಆಮದು ಪ್ರಕರಣದ ತನಿಖೆಗೆ ಅದಾನಿ ಸಮೂಹದಿಂದ ತಡೆ: ಹೈಕೋರ್ಟ್‌ಗೆ ತಿಳಿಸಿದ ಡಿಆರ್‌ಐ

Update: 2019-06-21 15:54 GMT

ಮುಂಬೈ, ಜೂ. 21: ಕೆಲವು ಕಂಪೆನಿಗಳು ಆಮದು ಕಲ್ಲಿದ್ದಲಿನ ಮೌಲ್ಯ ಹೆಚ್ಚಿಸಿದ ಕುರಿತ ತನಿಖೆಗೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಅಡ್ಡಿ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಕಂದಾಯ ಬೇಹುಗಾರಿಕೆಯ ನಿರ್ದೇಶನಾಲಯ (ಡಿಆರ್‌ಐ) ಆರೋಪಿಸಿದೆ.

ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಜೂನ್ 13ರಂದು ಸಲ್ಲಿಸಿದ ಅಫಿದಾವಿತ್‌ನಲ್ಲಿ ಡಿಆರ್‌ಐ, ವಿದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಗಳ ತನಿಖೆಗೆ ನ್ಯಾಯಾಂಗ ನೆರವು ನೀಡುವಂತೆ ಕೋರಿ ವಿದೇಶಿ ರಾಷ್ಟ್ರಗಳಿಗೆ ರವಾನಿಸಲಾದ ಔಪಚಾರಿಕ ಮನವಿಯನ್ನು ಪ್ರಶ್ನಿಸುವ ಮೂಲಕ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ತನಿಖೆಗೆ ಅಡ್ಡಿ ಉಂಟು ಮಾಡಿದೆ ಎಂದು ಹೇಳಿದೆ. ತನಿಖೆಗೆ ನೆರವು ನೀಡುವಂತೆ ಕೋರಿ ಭಾರತ ಇತರ ದೇಶಗಳಿಗೆ ಸಲ್ಲಿಸಿದ ಎಲ್ಲ ಮನವಿಗಳನ್ನು ರದ್ದುಪಡಿಸುವಂತೆ ಕೋರಿ ಅದಾನಿ ಕಂಪೆನಿ ಸಮೂಹ ಆಗಸ್ಟ್‌ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಭಾರತದಿಂದ ಪತ್ರ ಸ್ವೀಕರಿಸಿದ ಬಳಿಕ ಸಿಂಗಾಪುರ ನ್ಯಾಯಾಲಯ ತನಿಖೆಗೆ ದಾಖಲೆಗಳನ್ನು ಸಲ್ಲಿಸುವಂತೆ ಕೆಲವು ಕಂಪೆನಿಗಳಿಗೆ ನಿರ್ದೇಶಿಸಿತ್ತು. ಅನಂತರ ಅದಾನಿ ಕಂಪೆನಿ ಸಮೂಹ ನ್ಯಾಯಾಲಯಕ್ಕೆ ಈ ಮನವಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ಅದಾನಿ ಕಂಪೆನಿ ಸಮೂಹಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ, ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ, ತನಿಖೆಯನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಈಗ ಸುಪ್ರೀ ಕೋರ್ಟ್ ಪ್ರಕರಣವನ್ನು ಜೂನ್ ಅಂತ್ಯದ ಒಳಗೆ ಪರಿಹರಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

2011 ಹಾಗೂ 2015ರ ನಡುವೆ ಇಂಡೋನೇಶ್ಯಾದಿಂದ ಆಮದು ಮಾಡಲಾದ ಕಲ್ಲಿದ್ದಲಿಗೆ ಮೌಲ್ಯ ಹೆಚ್ಚಿಸಿದ ಬಗ್ಗೆ ಅದಾನಿ ಸಮೂಹ, ಅನಿಲ್ ದೀರೂಭಾಯ್ ಅಂಬಾನಿ ಸಮೂಹ ಹಾಗೂ ಎಸ್ಸಾರ್ ಸಮೂಹ ಸಹಿತ ಕನಿಷ್ಠ 40 ಕಂಪೆನಿಗಳ ಬಗ್ಗೆ ಡಿಆರ್‌ಐ ತನಿಖೆ ನಡೆಸುತ್ತಿದೆ. ಇಂಡೋನೇಶ್ಯದ ಕಲ್ಲಿದ್ದಲನ್ನು ಭಾರತಕ್ಕೆ ನೇರವಾಗಿ ಆಮದು ಮಾಡಲಾಗಿತ್ತು ಎಂದು ಡಿಆರ್ ಐ 2016 ಮಾರ್ಚ್‌ನಲ್ಲಿ ಹೇಳಿತ್ತು. ಆದರೆ, ಕಲ್ಲಿದ್ದಲಿನ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲು ಭಾರತದ ಕಂಪೆನಿಗಳ ಉಪ ಕಂಪೆನಿಗಳು ಎಂದು ಹೇಳಲಾದ ಮಧ್ಯವರ್ತಿಗಳ ಮೂಲಕ ಆಮದು ಇನ್ವಾಯಸ್ ಅನ್ನು ಸಲ್ಲಿಸಲಾಗಿತ್ತು ಎಂದು ಡಿಆರ್‌ಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News