ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಘೋಷಿಸಿ ರಾತ್ರಿಯಿಡೀ ಶವಾಗಾರದಲ್ಲಿರಿಸಿದ ವೈದ್ಯರು!

Update: 2019-06-22 14:13 GMT

 ಸಾಗರ(ಮ.ಪ್ರ.),ಜೂ.22: ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದ ವೃದ್ಧನೋರ್ವ ಇಡೀ ರಾತ್ರಿ ಶವಾಗಾರದಲ್ಲಿ ಇರಿಸಲ್ಪಟ್ಟು,ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆಗಳು ನಡೆದಾಗ ಜೀವಂತವಿದ್ದು ಉಸಿರಾಡುತ್ತಿದ್ದ! ಮಧ್ರಪ್ರದೇಶದ ಸಾಗರ ಜಿಲ್ಲೆಯ ಬಿನಾ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇದೊಂದು ಘೋರ ವೈದ್ಯಕೀಯ ನಿರ್ಲಕ್ಷದ ಪ್ರಕರಣವೆಂದು ಅರಿತ ವೈದ್ಯರು 72ರ ಹರೆಯದ ಕಾಶಿರಾಮನಿಗೆ ಚಿಕಿತ್ಸೆಯನ್ನು ಪುನರಾರಂಭಿಸಿದರಾದರೂ ಕೆಲವೇ ಹೊತ್ತಿನಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.

ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಕಾಶಿರಾಮರನ್ನು ಗುರುವಾರ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರ್ತವ್ಯದಲ್ಲಿದ್ದ ವೈದ್ಯರು ಆತ ಮೃತಪಟ್ಟಿದ್ದಾನೆಂದು ರಾತ್ರಿ ಒಂಭತ್ತರ ಸುಮಾರಿಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.

ಶುಕ್ರವಾರ ಬೆಳಗ್ಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲೆಂದು ಪೊಲೀಸರು ಆಸ್ಪತ್ರೆಗೆ ಬಂದಿದ್ದು,ಶವಾಗಾರದಿಂದ ‘ಶವ’ವನ್ನು ಹೊರಕ್ಕೆ ತೆಗೆದಾಗ ಕಾಶಿರಾಮ ಉಸಿರಾಡುತ್ತಲೇ ಇದ್ದ.

ಪೊಲೀಸರು ತಕ್ಷಣವೇ ಕರ್ತವ್ಯದಲ್ಲಿದ್ದ ವೈದ್ಯರಿಗೆ ಈ ಮಾಹಿತಿಯನ್ನು ನೀಡಿದ್ದರು. ಕಾಶಿರಾಮ ಬದುಕಿರುವುದನ್ನು ದೃಢಪಡಿಸಿದ ಅವರು ಕೂಡಲೇ ಚಿಕಿತ್ಸೆಯನ್ನು ಪುನರಾರಂಭಿಸಿದರಾದರೂ ಬೆಳಿಗ್ಗೆ 10:20ರ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್ ಅಧಿಕಾರಿ ವಿಕ್ರಮ ಸಿಂಗ್ ತಿಳಿಸಿದರು.

ಕಾಶಿರಾಮನನ್ನು ಜೂ.14ರಂದು ಮೊದಲ ಬಾರಿಗೆ ಈ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿತ್ತು.

ಇದು ವೈದ್ಯಕೀಯ ನಿರ್ಲಕ್ಷದ ಪ್ರಕರಣವಾಗಿದೆ. ನಾವು ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತೇವೆ ಮತ್ತು ಕಾನೂನಿನ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದರು.

ಕಾಶಿರಾಮ ಮೃತಪಟ್ಟಿದ್ದಾನೆಂದು ಘೋಷಿಸಿದ್ದ ವೈದ್ಯರ ವಿರುದ್ಧ ವಿಚಾರಣೆಯನ್ನು ಆರಂಭಿಸಿದ್ದೇವೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಸ್.ರೋಷನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News