ವಿದ್ಯುತ್ ಕಡಿತಕ್ಕೆ ಬಾವಲಿಗಳು ಕಾರಣ ಎಂದ ಅಧಿಕಾರಿಗಳು !

Update: 2019-06-22 14:24 GMT

ಭೋಪಾಲ, ಜೂ. 22: ಆಗಾಗ ಹಾಗೂ ನಿಗದಿತವಲ್ಲದ ವಿದ್ಯುತ್ ಕಡಿತದ ಸಮಸ್ಯೆಯಲ್ಲಿ ಮದ್ಯಪ್ರದೇಶ ಸಿಲುಕಿಕೊಂಡಿರುವಂತೆಯೇ, ಈ ಸಮಸ್ಯೆಗೆ ಬಾವಲಿಗಳು ಕಾರಣ ಎಂದು ರಾಜ್ಯ ವಿದ್ಯುತ್ ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ. ವಿದ್ಯುತ್ ಲೈನ್‌ಗಳಲ್ಲಿ ಬಾವಲಿಗಳು ನೇತಾಡುತ್ತಿರುವುದು ಕೆಲವು ಸಂದರ್ಭ ವಿದ್ಯುತ್ ಕಡಿತಕ್ಕೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

 ಆದರೆ, ಈ ಕಾರಣ ನೀಡುತ್ತಿರುವುದಕ್ಕೆ ಆಡಳಿತಾರೂಢ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಇಂತಹ ಕಾರಣ ನೀಡುವ ಬದಲು, ರಾಜ್ಯ ಸರಕಾರ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದಿದೆ. ವಿದ್ಯುತ್ ಸಮಸ್ಯೆಗೆ ಮುಖ್ಯ ಕಾರಣ ಬಾವಲಿಗಳಲ್ಲ. ಬದಲಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಅತಿಯಾದ ಹೊರೆಯಾಗುತ್ತಿರುವುದು ಕಾರಣ ಎಂದು ರಾಜ್ಯ ಇಂಧನ ಸಚಿವ ಪ್ರಿಯಾವ್ರತ್ ಸಿಂಗ್ ತಿಳಿಸಿದ್ದಾರೆ. ನಿರೋಧಕ ಅಳವಡಿಸುವ ಮೂಲಕ ವಿದ್ಯುತ್ ಪೂರೈಕೆ ಲೈನ್ ಅನ್ನು ದುರಸ್ಥಿಗೊಳಿಸುವಂತೆ ಹಾಗೂ ಬಾವಲಿಗಳು ತೊಂದರೆ ಉಂಟು ಮಾಡುವ ಸ್ಥಳದಲ್ಲಿ ಅಲ್ಟ್ರಾಸಾನಿಕ್ ಸಾಧನದ ಅಳವಡಿಕೆ ಪರಿಗಣಿಸುವಂತೆ ನಾನು ಅವರಲ್ಲಿ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕೆಲವು ಸ್ಥಳಗಳಲ್ಲಿ ಅಳಿಲು ಕೂಡ ತೊಂದರೆ ಉಂಟು ಮಾಡುತ್ತವೆ. ಆದರೆ, ಇದು ಪ್ರಮುಖ ಕಾರಣ ಅಲ್ಲ. ಮುಖ್ಯ ಕಾರಣ ಟ್ರಾನ್ಸ್‌ಫಾರ್ಮರ್‌ಗೆ ಹೊರೆಯಾಗುವುದು. ವಿದ್ಯುತ್ ಪೂರೈಕೆಯ ಲೈನ್‌ಗಳನ್ನು ಕಳೆದ ಕೆಲವು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ವಿದ್ಯುತ್ ಪೂರೈಕೆ ಲೈನ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News