×
Ad

ಸುಪ್ರೀಂ ಕೋರ್ಟ್ ಬಲ,ಹೈಕೋಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಿಸಲು ಪ್ರಧಾನಿಗೆ ಸಿಜೆಐ ಮನವಿ

Update: 2019-06-22 20:06 IST

 ಹೊಸದಿಲ್ಲಿ,ಜೂ.22: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪತ್ರಗಳನ್ನು ಬರೆದಿರುವ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ ಗೊಗೊಯಿ ಅವರು,ಸರ್ವೋಚ್ಚ ನ್ಯಾಯಾಲಯದ ಬಲವನ್ನು ಹೆಚ್ಚಿಸುವಂತೆ ಹಾಗೂ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಏರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 ಈ ಕ್ರಮಗಳಿಂದ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ 43 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿಯಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

 ವರ್ಷಗಳಿಂದಲೂ ಬಾಕಿಯಿರುವ ಪ್ರಕರಣಗಳ ವಿಚಾರಣೆ ನಡೆಸಲು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರಿಗೆ ಅವಕಾಶವನ್ನು ಕಲ್ಪಿಸುವ ಪದ್ಧತಿಯನ್ನು ಪುನರುಜ್ಜೀವನಗೊಳಿಸುವಂತೆ ನ್ಯಾ.ಗೊಗೊಯಿ ತನ್ನ ಮೂರನೇ ಪತ್ರದಲ್ಲಿ ಪ್ರಧಾನಿಯನ್ನು ಕೋರಿದ್ದಾರೆ. ಸಂವಿಧಾನದ 128 ಮತ್ತು 224ಎ ವಿಧಿಗಳಡಿ ಈ ಪದ್ಧತಿಗೆ ಅವಕಾಶವಿದೆ.

ಸರ್ವೋಚ್ಚ ನ್ಯಾಯಾಲಯವು 2008ರಿಂದೀಚಿಗೆ ಕಳೆದ ಮೇ ತಿಂಗಳಿನಲ್ಲಷ್ಟೇ 31 ನ್ಯಾಯಾಧೀಶರ ತನ್ನ ಪೂರ್ಣ ಬಲವನ್ನು ಪಡೆದುಕೊಂಡಿತ್ತು. 2008ರಲ್ಲಿ ಸಂಸತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು 26ರಿಂದ 31ಕ್ಕೆ ಹೆಚ್ಚಿಸಿತ್ತು.

 ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಾಗಲೇ 58,669 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಈ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ತಿಳಿಸಿರುವ ನ್ಯಾ.ಗೊಗೊಯಿ,26 ಪ್ರಕರಣಗಳು 25 ವರ್ಷಗಳಿಂದ,100 ಪ್ರಕರಣಗಳು 20 ವರ್ಷಗಳಿಂದ,593 ಪ್ರಕರಣಗಳು 15 ವರ್ಷಗಳಿಂದ ಮತ್ತು 4,997 ಪ್ರಕರಣಗಳು 10 ವರ್ಷಗಳಿಂದ ಬಾಕಿಯಿವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಹಿಂದಿನ ಸಲ ಬಲ ಹೆಚ್ಚಿಸಿದಾಗಿನಿಂದ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 41,078ರಿಂದ 58,669ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಧೀಶರ ಕೊರತೆಯಿಂದಾಗಿ ಪ್ರಮುಖ ವಿಷಯಗಳ ವಿಚಾರಣೆಗೆ ಐವರು ನ್ಯಾಯಾಧೀಶರ ಪೀಠಗಳನ್ನು ರಚಿಸಲು ತನಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನೂ ಅವರು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.

ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೇರಿಸುವಂತೆ ನ್ಯಾ.ಗೊಗೊಯಿ ತನ್ನ ಎರಡನೇ ಪತ್ರದಲ್ಲಿ ಮೋದಿಯವರನ್ನು ಕೋರಿದ್ದಾರೆ. 24 ಉಚ್ಚ ನ್ಯಾಯಾಲಯಗಳಲ್ಲಿ 43 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿಯಿದ್ದು, ಈ ಕ್ರಮದಿಂದ ಅವುಗಳ ವಿಲೇವಾರಿಗೆ ನೆರವಾಗಲಿದೆ ಎಂದಿರುವ ಅವರು,ಉಚ್ಚ ನ್ಯಾಯಾಲಯಗಳಲ್ಲಿ ಶೇ.37ರಷ್ಟು ನ್ಯಾಯಾಧೀಶರ ಹುದ್ದೆಗಳು ಖಾಲಿಯಾಗಿರುವುದನ್ನು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News