ಪಶ್ಚಿಮಬಂಗಾಳ: ಬಿಜೆಪಿ ನಿಯೋಗದ ಭೇಟಿಯ ಬಳಿಕ ಮತ್ತೆ ಹಿಂಸಾಚಾರ ಆರಂಭ

Update: 2019-06-22 14:46 GMT

ಬಾಟ್‌ಪಾರ, ಜೂ. 22: ಪಶ್ಚಿಮಬಂಗಾಳದ ಕೋಲ್ಕತಾದಿಂದ 30 ಕಿ.ಮೀ. ದೂರದಲ್ಲಿರುವ ಬಾಟಪಾರಕ್ಕೆ ಬಿಜೆಪಿ ನಾಯಕರ ನಿಯೋಗ ಶನಿವಾರ ಭೇಟಿ ನೀಡಿದ ಬಳಿಕ ಹಿಂಸಾಚಾರ ಮತ್ತೆ ಆರಂಭವಾಗಿದ್ದು, ಹಲವರು ಗಾಯಗೊಂಡಿದ್ದಾರೆ.

 ಇಲ್ಲಿ ಗುರುವಾರ ಸಂಭವಿಸಿದ ರಾಜಕೀಯ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಹಲವು ಮಂದಿ ಗಾಯಗೊಂಡ ಬಳಿಕ ಪರಿಸ್ಥಿತಿ ಪರಿಶೀಲಿಸಲು ಬಿಜೆಪಿಯ ಮೂವರು ಸದಸ್ಯರ ನಿಯೋಗ ಬಾಟಪಾರಕ್ಕೆ ಆಗಮಿಸಿತ್ತು. ನಿಯೋಗ ಹಿಂದಿರುಗಿದ ಕೂಡಲೇ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಗುರುವಾರದ ಹಿಂಸಾಚಾರದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನಿಷೇಧಾಜ್ಞೆ ಹೊರತಾಗಿ ಎರಡೂ ಗುಂಪುಗಳು ಪರಸ್ಪರ ಕಚ್ಚಾ ಬಾಂಬ್‌ಗಳನ್ನು ಎಸೆದವು.

ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದವು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಬಾಟಪಾರಕ್ಕೆ ಭೇಟಿ ನೀಡುವಂತೆ ಬಿಜೆಪಿಯ ಕೇಂದ್ರ ನಾಯಕತ್ವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಎಸ್.ಎಸ್. ಅಹ್ಲುವಾಲಿಯ, ಬಿಜೆಪಿ ಶಾಸಕರಾದ ಸತ್ಯಪಾಲ್ ಸಿಂಗ್ ಹಾಗೂ ಬಿ.ಡಿ. ರಾಮ್ ಉತ್ತರ 24 ಪರಗಣ ಬಾಟಪಾರಕ್ಕೆ ಭೇಟಿ ನೀಡಿದ್ದರು.

 ಬಿಜೆಪಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ನಿಯೋಗ ವರದಿ ಸಲ್ಲಿಸಲಿದೆ. ‘‘ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಾಗ, ಪೊಲೀಸರು ಒಂದು ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿದರೆ, ಇನ್ನೊಂದು ಗುಂಪಿನ ಮೇಲೆ ಗುಂಡು ಹಾರಿಸುತ್ತಾರೆ. ಈ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ.?, ಈ ಪಿತೂರಿಯ ಹಿಂದೆ ಯಾರಿದ್ದಾರೆ ?, ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕಿದೆ. ನಾವು ಅಮಿತ್ ಶಾ ಅವರಿಗೆ ವರದಿ ಸಲ್ಲಿಸಲಿದ್ದೇವೆ.’’ ಎಂದು ಬಿಜೆಪಿ ನಿಯೋಗದಲ್ಲಿದ್ದ ಬಿಜೆಪಿಯ ಅಹ್ಲುವಾಲಿಯ ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಸಿಪಿಎಂ ಹಾಗೂ ಕಾಂಗ್ರೆಸ್‌ನ ಜಂಟಿ ನಿಯೋಗ ಬರಾಯ್‌ಪಾಡ, ಜಗದ್ದಲಪುರ, ಬಾಟಪಾರಕ್ಕೆ ಭೇಟಿ ನೀಡಿತು. ಇಲ್ಲಿನ ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನಿಯೋಗ ಆಗ್ರಹಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News