‘ಟಾಪ್ 100’ ಸಾಲಗಾರರ ಸಾಲದಿಂದ 4.46 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ಸೃಷ್ಟಿ

Update: 2019-06-22 16:17 GMT

ಹೊಸದಿಲ್ಲಿ, ಜೂ.22: ಭಾರತದ ಶೇ.50ರಷ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ)ಯು ಸುಮಾರು 100 ಮಂದಿ ಉನ್ನತ ಸಾಲಗಾರರು ಪಡೆದಿರುವ ದೊಡ್ಡ ಮೊತ್ತದ ಸಾಲದಿಂದಾಗಿ ಉಂಟಾಗಿದೆಯೆಂದು ‘ದಿ ವೈರ್’ ಸುದ್ದಿಜಾಲ ತಾಣಕ್ಕೆ ಲಭ್ಯವಾಗಿರುವ ಆರ್‌ಟಿಐ ಉತ್ತರವು ಬಹಿರಂಗಪಡಿಸಿದೆ.

ಭಾರತದ ಉನ್ನತ 100 ಮಂದಿ ಸಾಲಗಾರರು ಪಡೆದಿರುವ ಸಾಲಗಳಿಂದಾಗಿ 4,46,158 ಕೋಟಿ ರೂ. ವೌಲ್ಯದ ಎನ್‌ಪಿಎ ಸೃಷ್ಟಿಯಾಗಿದೆ. ಅಂದರೆ ಈ ನೂರು ಮಂದಿ ಉನ್ನತ ಸಾಲಗಾರರು ತಲಾ 4,461 ಕೋಟಿ ರೂ. ಮೌಲ್ಯದ ಅನುತ್ಪಾದಕ ಆಸ್ತಿಯನ್ನು ಸೃಷ್ಟಿಸಿದ್ದಾರೆಂದು ಭಾರತೀಯ ರಿಸರ್ವ್ ಬ್ಯಾಂಕ್ 2018ರ ಡಿಸೆಂಬರ್ 31ರಂದು ತಿಳಿಸಿದೆ. ಆದರೆ ಈ ಟಾಪ್ 100 ಮಂದಿ ಸಾಲಗಾರರು ಯಾರೆಂಬ ಬಗ್ಗೆ ವಿವರಗಳನ್ನು ನೀಡಲು ಆರ್‌ಬಿಐ ನಿರಾಕರಿಸಿದೆ.

ಏನಿದು ಅನುತ್ಪಾದಕ ಆಸ್ತಿ: ಒಂದು ವೇಳೆ ಸಾಲಗಾರರು ನಿಗದಿತ ಕಾಲಮಿತಿಯೊಳಗೆ ತಮ್ಮ ಸಾಲದ ಖಾತೆಗೆ ಸಾಲದ ಬಡ್ಡಿ ಹಾಗೂ ಕಂತುಗಳು ಮತ್ತಿತರ ಬಾಕಿ ಹಣವನ್ನು ಪಾವತಿಸದೆ ಇದ್ದಲ್ಲಿ ಅದನ್ನು ಬ್ಯಾಂಕ್‌ನ ಅನುತ್ಪಾದಕ ಆಸ್ತಿಯೆಂದು ಪರಿಗಣಿಸಲಾಗುತ್ತದೆ.

ಕೇಂದ್ರ ವಿತ್ತ ಸಚಿವರು 2019ರ ಫೆಬ್ರವರಿ 5ರಂದು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ 2018ರ ಡಿಸೆಂಬರ್ 31ರಂದು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಎನ್‌ಪಿಎಗಳ ಒಟ್ಟು ಮೌಲ್ಯ 10,09,286 ಕೋಟಿ ರೂ.ಗಳಾಗಿವೆ. ಈ ಪೈಕಿ ಸಾರ್ವಜನಿಕರಂಗದ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಮೌಲ್ಯ 8,64,433 ಕೋಟಿ ರೂ.ಗಳಾಗಿವೆ ಎಂದು ತಿಳಿಸಿದ್ದರು.

 ಅಂದರೆ ದೇಶದ ಒಟ್ಟು ಅನುತ್ಪಾದಕ ಆಸ್ತಿಗಳ ಶೇಕಡ 44ರಷ್ಟನ್ನು ಕೇವಲ 100 ಮಂದಿ ಉನ್ನತ ಸಾಲಗಾರರು ನೀಡಬೇಕಿದೆ. ಕೇವಲ ಸಾರ್ವಜನಿಕರಂಗದ ಬ್ಯಾಂಕ್‌ಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಅವುಗಳ ಒಟ್ಟು ಎನ್‌ಪಿಎ ಮೌಲ್ಯದ ಶೇ.52ರಷ್ಟನ್ನು ಉನ್ನತ 100 ಮಂದಿ ಸಾಲಗಾರರು ನೀಡಬೇಕಿದೆ.

 ತಾನು ನೀಡಿರುವ ಒಟ್ಟು ಸಾಲದ ಮೊತ್ತದ ಶೇ.9.3 ಅನ್ನು ಅನುತ್ಪಾದಕ ಆಸ್ತಿಯೆಂದು 2019ರ ಮಾರ್ಚ್‌ನಲ್ಲಿ ಆರ್‌ಬಿಐ ಘೋಷಿಸಿತ್ತು.

ಸಾಲ ಸುಸ್ತಿದಾರರ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ 2019ರ ಎಪ್ರಿಲ್ 26ರಂದು ಕೈಗೆತ್ತಿಕೊಂಡಿತ್ತು. ಸುಸ್ತಿದಾರರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಆರ್‌ಬಿಐನ್ನು ಟೀಕಿಸಿದ ಸುಪ್ರೀಂಕೋರ್ಟ್, ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ ಸುಧಾರಣೆ ತರುವಂತೆ ಹಾಗೂ ಸಾರ್ವಜನಿಕರಿಗೆ ಆ ಬಗ್ಗೆ ವಿವರಣೆಗಳನ್ನು ನೀಡುವಂತೆ ಸೂಚಿಸಿತ್ತು.

ಒಂದು ವೇಳೆ ಆರ್‌ಬಿಐ ಇನ್ನೂ ಕೂಡಾ ಸುಸ್ತಿದಾರರ ವಿವರಗಳನ್ನು ನೀಡಲು ನಿರಾಕರಿಸಿದಲ್ಲಿ ಅದರ ವಿರುದ್ಧ ನ್ಯಾಯಾಂಗ ನಿಂದನೆಗಾಗಿ ಕ್ರಮ ಕೈಗೊಳ್ಳುವುದಾಗಿಯೂ ಸರ್ವೋಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News