ಐಆರ್‌ಎಸ್ ಬಳಿಕ ಈಗ ಕಳಂಕಿತ ಐಎಎಸ್,ಐಪಿಎಸ್ ಅಧಿಕಾರಿಗಳ ಕಡ್ಡಾಯ ನಿವೃತ್ತಿಗೆ ಮೋದಿ ಸರಕಾರ ಸಜ್ಜು

Update: 2019-06-22 16:29 GMT

ಹೊಸದಿಲ್ಲಿ,ಜೂ.22: ‘ಭ್ರಷ್ಟ ’ ಮತ್ತು ‘ನಿಷ್ಪ್ರಯೋಜಕ ’ ಸರಕಾರಿ ಅಧಿಕಾರಿಗಳನ್ನು ತೊಲಗಿಸುವ ತನ್ನ ಪ್ರಯತ್ನದ ಮುಂದುವರಿಕೆಯಾಗಿ ಇಂತಹ ಇನ್ನಷ್ಟು ಅಧಿಕಾರಿಗಳ ವಿರುದ್ಧ ಗದಾಪ್ರಹಾರಕ್ಕೆ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿರ್ಧರಿಸಿದೆ. ಅದು ‘ಕಳಂಕಿತ’ ಅಧಿಕಾರಿಗಳ ಕುರಿತು ಮಾಸಿಕ ಪರಾಮರ್ಶೆಯನ್ನೂ ನಡೆಸಲಿದೆ.

ಈಗಾಗಲೇ ಪ್ರತಿಷ್ಠಿತ ಐಆರ್‌ಎಸ್ ಸೇವೆಯಿಂದ 27 ಹಿರಿಯ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿರುವ ಸರಕಾರವು ಕೇಂದ್ರ ನಾಗರಿಕ ಸೇವೆ(ಪಿಂಚಣಿ) ನಿಯಮಾವಳಿಗಳ ಮೂಲಭೂತ ನಿಯಮ 56(ಜೆ) ಮತ್ತು ನಿಯಮ 48ರಡಿ ಅವಧಿಪೂರ್ವ ನಿವೃತ್ತಿಗಾಗಿ ಅಧಿಕಾರಿಗಳ ಹೆಸರುಗಳನ್ನು ಪ್ರತಿ ತಿಂಗಳು ಶಿಫಾರಸು ಮಾಡುವಂತೆ ಎಲ್ಲ ಸಚಿವಾಲಯಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮ(ಪಿಎಸ್‌ಯು)ಗಳಿಗೆ ಸೂಚಿಸಿದೆ. ಮೂಲಭೂತ ನಿಯಮ 56(ಜೆ) ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರಕಾರಿ ನೌಕರರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಅವಕಾಶವನ್ನು ಕಲ್ಪಿಸಿದೆ.

ಕೆಲವು ಕಳಂಕಿತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ದಂಡಿಸಲು ನಿಯಮವೊಂದನ್ನೂ ಸರಕಾರವು ಬಳಸಿಕೊಳ್ಳಬಹುದು ಮತ್ತು ಈ ಪೈಕಿ ಕೆಲವರು ಈಗಾಗಲೇ ಸರಕಾರದ ನಿಗರಾಣಿಯಲ್ಲಿರಬಹುದು ಎಂದು ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.

ನಿಷ್ಪ್ರಯೋಜಕ ಅಥವಾ ಭ್ರಷ್ಟ ಅಧಿಕಾರಿಗಳನ್ನು ದಂಡಿಸಲು ನಿಯಮವೊಂದು ಈಗಾಗಲೇ ಇದೆಯಾದರೂ ಅದನ್ನು ಅಪರೂಪವಾಗಿ ಬಳಸಲಾಗಿದೆ. ಆದರೆ ಮೋದಿ ಸರಕಾರವು ಆದಾಯ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಗಳ 27 ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವುದರೊಂದಿಗೆ ಈ ನಿಯಮವೀಗ ಹೆಚ್ಚಿನ ಬಲ ಪಡೆದುಕೊಂಡಿದೆ.

ತನ್ನ ಹಿಂದಿನ ಅಧಿಕಾರಾವಧಿಯಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಬಳಸಲು ಮೋದಿ ಸರಕಾರವು ಉದ್ದೇಶಿಸಿತ್ತು. ಈಗ ಹೆಚ್ಚಿನ ಜನಾದೇಶ ದೊರಕಿರುವುದರಿಂದ ಅದು ಈ ನಿಟ್ಟಿನಲ್ಲಿ ಹೆಚ್ಚು ಸಕ್ರಿಯಗೊಂಡಿದೆ.

ತಮಗೆ ಅನುಕೂಲರಲ್ಲದ ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳಲು ನಿಯಮದ ಸಂಭಾವ್ಯ ದುರುಪಯೋಗದ ಬಗ್ಗೆ ಕೆಲವು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರೆ,ಹೆಚ್ಚಿನ ಸರಕಾರಿ ನೌಕರರು ದೇಶದ ಅಧಿಕಾರಶಾಹಿಯ ಸುಧಾರಣೆಯಲ್ಲಿ ಇದೊಂದು ಸ್ವಾಗತಾರ್ಹ ಕ್ರಮವೆಂದು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News