‘ಹಫ್ತಾ’: ರೌಡಿಸಂ ಲೋಕದ ಕರಾಳ ಹಸ್ತ

Update: 2019-06-22 18:17 GMT

ರೌಡಿಸಂ ಚಿತ್ರಗಳೆಂದರೆ ಬಹಳಷ್ಟು ಬಾರಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗುತ್ತದೆ. ಯಾಕೆಂದರೆ ಸಾಮಾನ್ಯ ಪ್ರೇಕ್ಷಕರಿಗೆ ನಿಜವಾದ ರೌಡಿಸಂ ಹೇಗಿದೆ ಎನ್ನುವ ಬಗ್ಗೆ ಇಂದಿಗೂ ಕುತೂಹಲ ಉಳಿದಿದೆ. ಅದಕ್ಕೆ ಕಾರಣ, ರಿಯಲ್ ಲೈಫಲ್ಲಿ ರೌಡಿಸಂ ನೋಡಲು ಬಯಸದವರು ಕೂಡ ಸಿನೆಮಾದಲ್ಲಿ ಅದೇನು ಎಂದು ತಿಳಿಯಲು ಕಾತರರಾಗಿರುತ್ತಾರೆ. ಅಂಥ ಕಾತರಕ್ಕೆ ಒಂದಷ್ಟು ನೈಜವೆನಿಸುವ ಸರಕಿನ ಚಿತ್ರ ದೊರೆತರಂತೂ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಹಾಗಾಗಿ ಈ ವಾರ ಎಲ್ಲರೂ ‘ಹಫ್ತಾ’ ನೀಡಲು ಅಲ್ಲ ನೋಡಲು ಆಸಕ್ತಿ ತೋರಿಸಿದ್ದಾರೆ.

ಕೃಷ್ಣ ಅಲಿಯಾಸ್ ಕುಡ್ಲ ವಾಟರ್ ಸಪ್ಲೈ ಮಾಡುತ್ತಿದ್ದಂತಹ ಯುವಕ. ಆ ದಿನಗಳಿಂದಲೇ ಆತನಿಗೆ ಭರತನಾಟ್ಯದ ವಿದ್ಯಾರ್ಥಿನಿಯೊಬ್ಬಳ ಜತೆಗೆ ಪ್ರೇಮ. ಆದರೆ ಕಾಲದ ಕೈಗೆ ಸಿಲುಕಿ ರೌಡಿಸಂ ಲೋಕದಲ್ಲಿ ಪಾತಕಿಯಾಗಿ ಗುರುತಿಸಲ್ಪಡುತ್ತಾನೆ ಕುಡ್ಲ. ಆತನಿಗೊಬ್ಬ ಸ್ನೇಹಿತ. ಆತನ ಹೆಸರು ಶಂಕರ್ ಎರವಾಡ. ಇಬ್ಬರೂ ಬಾಲ್ಯದಿಂದಲೇ ಆತ್ಮೀಯರಾಗಿ ಬೆಳೆದವರು. ಇಬ್ಬರೂ ಸೇರಿ ಹಫ್ತಾ ವಸೂಲಿ ಮಾಡುವುದನ್ನೇ ಉದ್ಯೋಗವಾಗಿಸಿರುತ್ತಾರೆ. ಇದರ ನಡುವೆ ಇವರಂತಹ ರೌಡಿಗಳನ್ನು ಇರಿಸಿಕೊಂಡೇ ಸಮಾಜದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಂಡವನು ಕುಲಾಲ್ ಪಾಂಡೆ. ಆದರೆ ಆತನಿಗೂ ಕುಡ್ಲ ಮತ್ತು ಶಂಕರ್ ಎರವಾಡ ಎಂಬ ಈ ಸ್ನೇಹಿತರಿಗೂ ವೈಮನಸ್ಸುಂಟಾಗುತ್ತದೆ. ಅದು ಚಿತ್ರದ ಕಥೆಯಲ್ಲಿ ಮೂಡಿಸುವ ತಿರುವೇನು ಎನ್ನುವುದೇ ಚಿತ್ರದ ಕಥೆ.

ನಿರ್ದೇಶಕರು ಒಂದು ಒಳ್ಳೆಯ ಕಥಾಸಾರ ಇರಿಸಿಕೊಂಡಿರುವುದೇನೋ ನಿಜ. ಆದರೆ ಅದನ್ನು ತೆರೆಗೆ ತರುವಲ್ಲಿ ಸೋತಿರುವುದು ಅಷ್ಟೇ ನಿಜ. ಮೊದಲನೆಯದಾಗಿ ಹಫ್ತಾ ಎನ್ನುವ ಹೆಸರಿಗೂ ಚಿತ್ರಕ್ಕೂ ಆಪ್ತ ಸಂಬಂಧಗಳೇನಿಲ್ಲ. ವರ್ಧನ್ ಅವರನ್ನು ಮಂಗಳಮುಖಿಯಾಗಿ ತೋರಿಸುವ ಮೂಲಕ ಆ ಕತೆಯ ಬಗ್ಗೆ ಕುತೂಹಲ ಮೂಡಿಸಲಾಗಿತ್ತು. ಆದರೆ ಇಲ್ಲಿ ಮಂಗಳಮುಖಿಯರ ಬಾಳಿನ ಸಾಮಾನ್ಯ ದೈನ್ಯತೆಯಾಚೆ ಹೆಚ್ಚಿನದನ್ನು ನಾಯಕನಿಂದ ಸಾಧಿಸಲಾಗುವುದಿಲ್ಲ. ಆದರೆ ರೌಡಿಸಂ ವಿಚಾರ ಬಂದರೆ ಮಾತ್ರ ಆತ ಹಳೆಯ ರೌಡಿಯೇ ಎನ್ನುವ ವಿರೋಧಾಭಾಸವಿದೆ. ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಥೆ ಎನ್ನುವ ರೀತಿಯಲ್ಲಿ ತೋರಿಸಲಾಗಿರುವ ಚಿತ್ರಕ್ಕೆ ಹಫ್ತಾ ಎಂಬ ಹೆಸರೇಕೆ, ನಾಯಕ ಕುಡ್ಲ ಎಂದು ಕರೆಸಿಕೊಳ್ಳುವುದೇಕೆ ಎನ್ನುವ ಪ್ರಶ್ನೆಗಳಿಗೆ ಸರಿಯಾದ ಉತ್ತರವಿಲ್ಲ. ಕುಡ್ಲ ಎನ್ನುವುದು ತುಳು ಭಾಷೆಯಲ್ಲಿ ಮಂಗಳೂರಿಗೆ ಇರುವ ಪರ್ಯಾಯ ನಾಮ. ಹಾಗಂತ ಕೃಷ್ಣ ತುಳು ಮಾತನಾಡುವ ಮಂಗಳೂರ ಯುವಕ ಎಂದು ಚಿತ್ರ ಹೇಳುವುದಿಲ್ಲ.

ಬಾಲರಾಜ್ ವಾಡಿಗೆ ನೀಡಿರುವ ಕುಲಾಲ್ ಪಾಂಡೆ ಎನ್ನುವ ಹೆಸರು ಕೂಡ ನಿರ್ದೇಶಕರು ಗಿಮಿಕ್‌ಗೆ ಪ್ರಾಧಾನ್ಯತೆ ನೀಡುವವರು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಆದರೆ ನಟನೆಯ ವಿಚಾರಕ್ಕೆ ಬಂದರೆ ಪ್ರಧಾನ ಪಾತ್ರಗಳೆಲ್ಲವನ್ನು ನೈಜತೆಯ ಅಭಿನಯದ ಮೂಲಕ ಗುರುತಿಸುವಂತೆ ಮಾಡಲಾಗಿದೆ. ಬಾಲರಾಜ್ ವಾಡಿ ಅವರಲ್ಲೊಬ್ಬರು. ಕುಡ್ಲನ ಪ್ರೇಯಸಿ ಭರತನಾಟ್ಯ ಕಲಾವಿದೆಯಾಗಿ ಬಿಂಬ ಶ್ರೀ ನೀನಾಸಂ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನೀಡಿದ್ದಾರೆ. ಎಂಟೆಕ್ ಮಾಡಿರುವ ಎರವಾಡ ಶಂಕರನ ಪಾತ್ರಕ್ಕೆ ಯುವ ನಟ ರಾಘವ ನಾಗ್ ಜೀವ ತುಂಬಿದ್ದಾರೆ. ಆದರೆ ಆತ ಎಂಟೆಕ್ ಪದವಿ ಪಡೆದಿರುವ ಕಾರಣ ಕುಳಿತಲ್ಲೇ ಎಲ್ಲ ಯೋಜನೆ ಹಾಕುತ್ತಾನೆ ಎಂದು ತೋರಿಸಲಿಕ್ಕಾಗಿ ಸದಾ ಲ್ಯಾಪ್‌ಟಾಪ್ ಜತೆಗೆ ಕುಳಿತುಕೊಳ್ಳುವಂತೆ ಮಾಡಿದ್ದು ಅಕ್ಷಮ್ಯ. ನೋಡಲು ಸೌಮ್ಯ ಸ್ವಭಾವದಂತೆ ಕಂಡರೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಕೂಡ ಅದ್ಭುತವಾಗಿ ಪಾಲ್ಗೊಂಡಿದ್ದಾರೆ ರಾಘವ ನಾಗ್. ಸೆಂಟಿಮೆಂಟ್ ದೃಶ್ಯವೊಂದರಲ್ಲಿ ಕುಡ್ಲನನ್ನು ಭೇಟಿಯಾಗುವ ಶಂಕರ್ ಎರವಾಡನ ಮುಖದಲ್ಲಿ ಉಂಟಾಗುವ ಬದಲಾವಣೆಗಳು ರಾಘವ ನಾಗ್ ನಟನೆಯ ಹೈಲೈಟ್. ಆತನ ಜೋಡಿಯಾಗಿ ಕಾಣಿಸಿರುವ ಸೌಮ್ಯ ಕೂಡ ಭರವಸೆಯ ನಟಿಯೆನಿಸುತ್ತಾರೆ. ಉಳಿದಂತೆ ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಕೂಡ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಪ್ರಿಯರು ನೋಡಬಹುದಾದ ಚಿತ್ರ ಹಫ್ತಾ ಎನ್ನುವುದರಲ್ಲಿ ಸಂದೇಹವಿಲ್ಲ.

ತಾರಾಗಣ: ವರ್ಧನ್ ತೀರ್ಥಹಳ್ಳಿ, ರಾಘವನಾಗ್
ನಿರ್ದೇಶನ: ಪ್ರಕಾಶ್ ಹೆಬ್ಬಾಳ
ನಿರ್ಮಾಪಕ: ಮೈತ್ರಿ ಮಂಜುನಾಥ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News