ತಾಯಿಬೇರಿನ ಕುಡಿಗಳು

Update: 2019-06-22 18:30 GMT

ಮಾಸ್ತಿ ಕಥಾ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿರುವ ಶೇಷಾದ್ರಿ ಕಿನಾರ ಮತ್ತು ಎ. ಎನ್. ಪ್ರಸನ್ನ ಕನ್ನಡ ಕಥಾಪ್ರಿಯರಿಗೆ ಹೊಸಬರೇನಲ್ಲ. ಸುಮಾರ ನಾಲ್ಕು ದಶಕಗಳಿಂದಲೇ ಸಣ್ಣ ಕಥೆಯಲ್ಲಿ ಕೃಷಿ ಮಾಡುತ್ತ ತಮ್ಮ ಛಾಪನ್ನು ಮೂಡಿಸಿರುವವರು. ಇಬ್ಬರೂ ಎರಡಕ್ಕಿಂತ ಹೆಚ್ಚು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದರೆ ಕನ್ನಡ ವಿಮರ್ಶೆ ಈ ಇಬ್ಬರು ಸೃಜನಶೀಲರ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ.


ಕನ್ನಡ ಸಣ್ಣ ಕಥೆಯ ಪರಂಪರೆಯ ವಿಕಾಸದ ತಾಯಿಬೇರು ‘ಶ್ರೀನಿವಾಸ’ ಕಾವ್ಯನಾಮಾಂಕಿತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಈ ತಾಯಿಬೇರಿನ ಜೀವರಸ ಉಂಡು ಕನ್ನಡ ಸಣ್ಣ ಕಥೆ ರೆಂಬೆ, ಕೊಂಬೆ, ಕವಲುಗಳಾಗಿ ಚಿಗಿತು ಹೊಸ ವಿಸ್ತಾರಗಳಿಗೆ, ಹೊಸ ದಿಗಂತಗಳಿಗೆ ಚಾಚಿಕೊಂಡು ದಷ್ಟಪುಷ್ಟ ಪರಂಪರೆಯಾಗಿ ಬೆಳೆದಿರುವ ‘ಪ್ರತಿಭಾ ಪವಾಡ’ ನಮ್ಮ ಕಣ್ಣ ಮುಂದಿದೆ. ನವೋದಯ, ಪ್ರಗತಿಶೀಲ, ದಲಿತ, ಬಂಡಾಯ-ಚಳವಳಿ ಯಾವುದೇ ಇರಲಿ ಮಾಸ್ತಿಯವರ ಕಥನ ಕಲೆ ಮತ್ತು ಮಾನವೀಯ ಮೌಲ್ಯಗಳು ಈ ಕತೆಗಾರರನ್ನು ಒಂದಲ್ಲ ಒಂದು ರೀತಿ ಪ್ರಭಾವಿಸಿರುವುದನ್ನು ನಾವು ಕಾಣುತ್ತೇವೆ. ಮಾಸ್ತಿಯವರು ರೂಪಿಸಿದ ಕನ್ನಡ ಸಣ್ಣ ಕಥೆಯ ಮಾರ್ಗ ಈ ಚಳವಳಿಗಳ ಎಲ್ಲ ಕಾಲಘಟ್ಟಗಳಲ್ಲೂ ತನ್ನದೇ ಸ್ವಂತಿಕೆಯನ್ನು ಬೆಳೆಸಿಕೊಂಡು ಮೆರೆದಿರುವುದುಂಟು, ಕನ್ನಡ ಸಣ್ಣಕಥೆಯ ಪರಂಪರೆಯನ್ನು ಶ್ರೀಮಂತಗೊಳಿಸಿರುವುದುಂಟು. ಕನ್ನಡದಲ್ಲಿ ಸಣ್ಣ ಕಥೆ ಪರಂಪರೆ ಹೀಗೆ ಇತ್ಯೋಪ್ಯತಿಶಯವಾಗಿ ಬೆಳೆಯುತ್ತಿರುವುದಕ್ಕೆ, ಹೊಸ ಕತೆಗಾರರು ಹುಟ್ಟುತ್ತಿರುವುದಕ್ಕೆ ಪರಂಪರೆಯ ಜೀವರಸದೊಂದಿಗೆ ಹೊರಗಿನಿಂದ ದೊರಯುತ್ತಿರುವ ಪ್ರೋತ್ಸಾಹ ಮುಖ್ಯವಾದುದು.

ಕನ್ನಡದಲ್ಲಿ ಸಣ್ಣ ಕಥೆಯ ಬೆಳೆಸಿನಲ್ಲಿ ಕನ್ನಡ ಪತ್ರಿಕೆಗಳು ಮತ್ತು ಸಂಘ ಸಂಸ್ಥೆಗಳ ಪಾತ್ರ ಮಹತ್ವಪೂರ್ಣವಾದುದು. ಕಥಾ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ, ಕಥಾ ಸಂಕಲನಗಳಿಗೆ ಬಹುಮಾನ ಮೊದಲಾದ ಗೌರವಪುರಸ್ಕಾರಗಳನ್ನು ನೀಡುವ ಮೂಲಕ ಇವು ಸಣ್ಣಕಥೆಗೆ ಪರಂಪರೆಯ ತಾಯಬೇರಿನಂತೆಯೇ ವರ್ತಮಾನದ ಪೋಷಕದ್ರವ್ಯವಾಗಿ ಸ್ಫೂರ್ತಿಮೂಲವಾಗಿವೆ. ಇಂತಹವುಗಳಲ್ಲಿ ಒಂದು ಮಾಸ್ತಿ ಟ್ರಸ್ಟ್. ಜೀವಮಾನದ ಸಾಧನೆಗಾಗಿ ಸಾಹಿತ್ಯದ ವಿವಿಧ ಪ್ರಕಾರಗಳ ಲೇಖಕರಿಗೆ ಮಾಸ್ತಿ ಪ್ರಶಸ್ತಿ ನೀಡುತ್ತಾ ಬಂದಿರುವ ಮಾಸ್ತಿ ಟ್ರಸ್ಟ್ ಕತೆಗಾರರು, ಕಾದಂಬರಿಕಾರರು ಮತ್ತು ಪ್ರಕಾಶಕರಿಗೂ ಮಾಸ್ತಿ ಕಥಾ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಪ್ರತಿ ವರ್ಷ ಸ್ಪರ್ಧೆ ಏರ್ಪಡಿಸಲಾಗುತ್ತದೆ, ಸ್ಪರ್ಧೆಗೆ ಬಂದ ಕೃತಿಗಳನ್ನು ಖ್ಯಾತ ವಿಮರ್ಶಕರನ್ನೊಳಗೊಂಡ ಸಮಿತಿಯ ಪರಾಮರ್ಶೆಗೊಳಪಡಿಸಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಮಾಸ್ತಿ ಟ್ರಸ್ಟಿನ ಅಧ್ಯಕ್ಷರಾದ ಮಾವಿನಕೆರೆ ರಂಗನಾಥನ್.

ಹೀಗೆ ಪ್ರತಿವರ್ಷ ಅದರ ಹಿಂದಿನ ವರ್ಷದ ಉತ್ತಮ ಕಥಾಸಂಕಲನಕ್ಕೆ, ಉತ್ತಮ ಕಾದಂಬರಿಗೆ ಹಾಗೂ ಅವುಗಳ ಪ್ರಕಾಶಕರಿಗೆ ನೀಡಲಾಗುತ್ತಿರುವ ಮಾಸ್ತಿ ಕಥಾ ಪ್ರಶಸ್ತಿಯ ಮೊತ್ತ, ಲೇಖಕರಿಗೆ ಇಪ್ಪತ್ತು ಸಾವಿರ, ಪ್ರಕಾಶಕರಿಗೆ ಹದಿನೈದು ಸಾವಿರ. ಕನ್ನಡದಲ್ಲಿ ಕಥಾ ಸಾಹಿತ್ಯ ಹೆಚ್ಚಾಗಿ ಪ್ರಕಟವಾಗುತ್ತಿದೆ ಎನ್ನುವುದಕ್ಕೆ ಏನಾದರೂ ಸಾಕ್ಷಿಪುರಾವೆ ಬೇಕೆನಿಸಿದಲ್ಲಿ ಮಾಸ್ತಿ ಕಥಾ ಸಾಹಿತ್ಯ ಪ್ರಶಸ್ತಿಯನ್ನು ಗಮನಿಸಬಹುದು. ‘‘ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆಗೆ ಬರುತ್ತಿರುವ ಕಥೆ/ಕಾದಂಬರಿಗಳ ಸಂಖ್ಯೇ ಹೆಚ್ಚುತ್ತಲೇ ಇದೆ’’ ಎನ್ನುತ್ತಾರೆ ಮಾವಿನಕೆರೆ.

ಕಳೆದ ವರ್ಷ(2018) ಸ್ಪರ್ಧೆಗೆ ಬಂದ ಕಾದಂಬರಿಗಳ ಸಂಖ್ಯೆ 20, ಕಥಾ ಸಂಕಲನಗಳ ಸಂಖ್ಯೆ 36. ಈ ವರ್ಷ(2019) 40 ಕಥಾ ಸಂಕಲನಗಳು ಹಾಗೂ 24 ಕಾದಂಬರಿಗಳು ಸ್ಪರ್ಧೆಗೆ ಬಂದಿದ್ದವು. ಈ ವರ್ಷ ಇಬ್ಬರು ಕಥೆಗಾರರು ಮಾಸ್ತಿ ಕಥಾಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವುದು ಒಂದು ವಿಶೇಷ. ಸ್ಪರ್ಧೆಯಲ್ಲಿ ಇಬ್ಬರು ಕತೆಗಾರರು ಸಮಸಮ ಅರ್ಹತೆಯ ಗುರಿಮುಟ್ಟಿರುವುದರಿಂದ ಆ ಇಬ್ಬರಿಗೂ ಪ್ರಶಸ್ತಿ ನೀಡಲು ಟ್ರಸ್ಟ್ ತೀರ್ಮಾನಿಸಿದೆ ಎಂಬುದು ಮಾವಿನಕೆರೆಯವರ ಸಮಜಾಯಿಷಿ. ಹೀಗೆ ಈ ವರ್ಷ ಮಾಸ್ತಿ ಕಥಾ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವವರು ಶಿವಮೊಗ್ಗೆಯ ಶೇಷಾದ್ರಿ ಕಿನಾರ(ಕಥಾ ಸಂಕಲನ: ‘ಅವತಾರ’) ಮತ್ತು ಬೆಂಗಳೂರಿನ ಎ. ಎನ್. ಪ್ರಸನ್ನ (ಕಥಾ ಸಂಕಲನ: ‘ಪ್ರತಿಫಲನ’) ಕಾದಂಬರಿ ಪ್ರಕಾರದಲ್ಲಿ ಈ ಪ್ರಶಸ್ತಿ ಪಡೆದಿರುವವರು ಚಿಕ್ಕಮಗಳೂರಿನ ಎಂ. ಆರ್. ದತ್ತಾತ್ರಿ (ಕೃತಿ:‘ತಾರಾಬಾಯಿಯ ಪತ್ರ’).

ಇನ್ನೊಂದು ವಿಶೇಷವೆಂದರೆ ಈ ವರ್ಷ ಜೀವಮಾನ ಸಾಧನೆಗಾಗಿ ನೀಡಲಾಗುವ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವವರಲ್ಲಿ ಕತೆಗಾರರೇ ಮೇಲುಗೈ ಪಡೆದಿರುವುದು. ವಿಮರ್ಶಾ ಕ್ಷೇತ್ರದಲ್ಲಿನ-ಸಾಹಿತ್ಯ, ನಾಟಕ ಸಾಹಿತ್ಯ ಮತ್ತು ರಂಗಭೂಮಿ-ಸಾಧನೆಗಾಗಿ ಡಾ.ಮರುಳಸಿದ್ದಪ್ಪನವರು ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದರೆ, ಅವರ ಜೊತೆ ಪ್ರಶಸ್ತಿ ಪಡೆಯುತ್ತಿರುವ ಮೊಗಳ್ಳಿ ಗಣೇಶ್, ಬೊಳುವಾರು ಮುಹಮ್ಮದ್ ಕುಂಞಿ, ಈಶ್ವರ ಚಂದ್ರ ಇವರೆಲ್ಲರೂ ಕನ್ನಡ ಸಣ್ಣ ಕಥೆಗೆ ಗಣನೀಯ ಕೊಡುಗೆ ನೀಡಿರುವವರು.ಮಾಸ್ತಿ ಪ್ರಶಸ್ತಿಗೆ ಪಾತ್ರರಾಗಿರುವ ಸೋದರಿ ಸವಿತಾ ನಾಗಭೂಷಣ ಅವರು ಕಾವ್ಯ ರಚನೆಯಲ್ಲಿ ಗಣನೀಯ ಸಾಧನೆ ಮಾಡಿರುವವರು.

ಮಾಸ್ತಿ ಕಥಾ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿರುವ ಶೇಷಾದ್ರಿ ಕಿನಾರ ಮತ್ತು ಎ. ಎನ್. ಪ್ರಸನ್ನ ಕನ್ನಡ ಕಥಾಪ್ರಿಯರಿಗೆ ಹೊಸಬರೇನಲ್ಲ. ಸುಮಾರು ನಾಲ್ಕು ದಶಕಗಳಿಂದಲೇ ಸಣ್ಣ ಕಥೆಯಲ್ಲಿ ಕೃಷಿ ಮಾಡುತ್ತ ತಮ್ಮ ಛಾಪನ್ನು ಮೂಡಿಸಿರುವವರು. ಇಬ್ಬರೂ ಎರಡಕ್ಕಿಂತ ಹೆಚ್ಚು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದರೆ ಕನ್ನಡ ವಿಮರ್ಶೆ ಈ ಇಬ್ಬರು ಸೃಜನಶೀಲರ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ.

 ಸಂಕೋಚ ಸ್ವಭಾವದ, ಪ್ರಚಾರ-ಪ್ರಸಿದ್ಧಿಗಳಿಗೆ ಹಪಹಪಿಸದ ಶೇಷಾದ್ರಿ ಕಿನಾರ ಮಲೆನಾಡಿನ ತಮ್ಮ ಪ್ರಪಂಚದಲ್ಲೇ ಕಳೆದುಹೋದವರು. ಕಥಾ ಸೃಷ್ಟಿಯಲ್ಲೂ ಇವರು ಮಿತಸಂಸಾರಿ. ಕಿನಾರ ಅವರ ಮೊದಲ ಕಥಾ ಸಂಕಲನ ‘ಛೇದ’ 1981ರಲ್ಲಿ ಪ್ರಕಟವಾಯಿತು. ಇಪ್ಪತ್ತೆರಡು ವರ್ಷಗಳ ನಂತರ ಎರಡನೇ ಸಂಕಲನ ‘ಕಂಡ ಜಗತ್ತು’(2003) ಹೊರಜಗತ್ತಿಗೆ ಅನಾವರಣಗೊಂಡಿತು. ಮೂರನೆಯ ಸಂಕಲನ ‘ಅವತಾರ’(2018)ರಲ್ಲಿ ಪ್ರಕಟವಾಯಿತು. ಒಂದು ಸಂಕಲನದಿಂದ ಮತ್ತೊಂದು ಸಂಕಲನದ ನಡುವಣ ಸುದೀರ್ಘ ಧ್ಯಾನಸ್ಥ ಅವಧಿಯೇ ಶೇಷಾದ್ರಿ ಕಿನಾರ ಅವರ ಸೃಜನಶೀಲತೆಯ ಸಂಯಮವನ್ನೂ ಅವರ ಬರವಣಿಗೆಯಲ್ಲಿನ ಪಕ್ವತೆಯನ್ನೂ ಹದವನ್ನೂ ಸೂಚಿಸುತ್ತದೆ. ಶೇಷಾದ್ರಿ ಕಿನಾರರು ಓದುಬರಹ ಪ್ರಾರಂಭಿಸಿದ ಕಾಲ ನವ್ಯ ಸಾಹಿತ್ಯ ಇನ್ನೂ ಪ್ರಭಾವಶಾಲಿಯಾಗಿದ್ದ ಕಾಲಾವಧಿ. ನವ್ಯದ ಕಾಳಜಿಗಳಲ್ಲಿ ಮುಖ್ಯವಾದ ವ್ಯಕ್ತಿಕೇಂದ್ರಿತ ಧ್ಯಾನ, ಅನಾಥ ಪ್ರಜ್ಞೆ, ಬದುಕಿನ ಅಸಂಗತ್ವ ಮತ್ತು ಫ್ಯಾಂಟಸಿಯ ಅಥವಾ ಮಾಯಾವಾಸ್ತವ (ಮ್ಯಾಜಿಕಲ್ ರಿಯಲಿಸಂ)ತಂತ್ರಗಳು-ಹೀಗೆ ಉದಯೋನ್ಮುಖ ಲೇಖಕರು ಹೊಸ ಅಭಿವ್ಯಕ್ತಿಯ ಅನ್ವೇಷಣೆಗಾಗಿ ಹಲವು ದಿಕ್ಕುಗಳತ್ತ ಕೈಚಾಚಿದ್ದ ದಿನಗಳು. ಶೇಷಾದ್ರಿ ಕಿನಾರರೂ ಇದಕ್ಕೆ ಹೊರತಾಗಿರಲಿಲ್ಲ. ಅವರ ಮೊದಲೆರಡು ಸಂಕಲನದ ಕಥೆಗಳಲ್ಲೂ ಫ್ಯಾಂಟಸಿ ಅಥವಾ ಮಾಯಾವಾಸ್ತವ ತಂತ್ರದಲ್ಲೇ ಬದುಕಿನ ಅನ್ವೇಷಣೆ ಇದೆ, ಕಥೆಗಾರನ ಜೀವನ ದರ್ಶನವಿದೆ.

ಎರಡನೇ ಸಂಕಲನ-ಕಂಡ ಜಗತ್ತು. ಹದಿನೈದು ವರ್ಷಗಳ ನಂತರ ಬಂದಿರುವ ‘ಅವತಾರ’ದಲ್ಲಿ ಕಿನಾರರು ಢಾಳಾಗಿ ಕಾಣಿಸುವ ಫ್ಯಾಂಟಸಿಯಿಂದ ಹೊರಬಂದು ಜೀವನದ ಕರಾಳ ಸತ್ಯಗಳನ್ನು, ಅಸಂಗತತೆಗಳನ್ನು ಅವುಗಳ ಯಥಾರ್ಥತೆಯಲ್ಲೇ ನೋಡುವಷ್ಟು ಧಾರ್ಷ್ಟ್ಯರಾಗಿ ಬೆಳೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೊಂದು ಹೊರಳು-ಜೀವನ ದರ್ಶನದಲ್ಲಿನ ಪ್ರಬುದ್ಧತೆ ಮತ್ತು ಕಥನ ಕ್ರಮದಲ್ಲಿ ಸಂಕಥನದತ್ತ(ಇದನ್ನೇ ತಿರುಮಲೇಶರು ಮೌಖಿಕ ಸಂಸ್ಕೃತಿಯ ಕೊಂಡಿ ಎಂದು ಮುನ್ನುಡಿಯಲ್ಲಿ ಗುರುತಿಸಿರುವುದು) ವಾಲುತ್ತಿರುವ ಬರವಣಿಗೆಯ ಹೊರಳು ಇದು. ‘ಅವತಾರ’ ಮತ್ತು ‘ತಿಂಡಿ ಸುಬ್ಬ’ ಸಂಕಥನದ (ಡಿಸ್ಕೋರ್ಸ್)ಎಲ್ಲೆಗೆ ಬಂದು ಮುಟ್ಟಿವೆ. ಪ್ರಶಸ್ತಿ ವಿಜೇತ ‘ಅವತಾರ’ದ ಈ ಶೀರ್ಷಿಕೆಯೇ ಧ್ವನಿಪೂರ್ಣವಾದುದು.ವಿಷ್ಣುವಿಗೆ ಹತ್ತು ಅವತಾರಗಳು. ಅವನ ಸೃಷ್ಟಿಗೋ, ಅವನು ಕೊಟ್ಟ ಮಾನವಾವತಾರದ ಜೊತೆಗೆ ಅವರು ಧರಿಸಿದ ಅವತಾರಗಳು ಹಲವಾರು.ಇಂಥ ಮಾನವಾಸಂಗತ್ವಗಳ ದರ್ಶಿನಿ ‘ಅವತಾರಗಳು’. ಈ ದರ್ಶನದಲ್ಲಿ ಬದುಕಿನ ಅಸಂಗತ್ವವಿದೆ, ಕಟು ಸತ್ಯಗಳಿವೆ, ಮಾನವನ ದುರ್ದೆಶೆ, ಆಪತ್ತು, ಸಂಕಟಗಳಿವೆ, ಕಷ್ಟಕಾರ್ಪಣ್ಯಗಳಿವೆ. ಈ ಅಂಕಣದ ಮಿತಿಯಲ್ಲಿ ಕಿನಾರರ ಎಲ್ಲ ಕಥೆಗಳ ವಿಮರ್ಶೆಯಿರಲಿ, ಅವಲೋಕನವೂ ಸಾಧ್ಯವಿಲ್ಲ. ನನಗೆ ತುಂಬ ಇಷ್ಟವಾದ; ಇವೆಲ್ಲವನ್ನೂ ತೀವ್ರವಾಗಿ ಭಾವಿಸುವ ಹಾಗೂ ಅನುಭಾವಿಸುವ ಪಾತ್ರಗಳು ಇಲ್ಲಿವೆ.

ಉದಾ: ತಿಂಡಿಸುಬ್ಬ, ‘ಅವತಾರದ’ ಕಪನೀಪತಿ, ‘ಕಣ್ಮಾಯ ಕಣ್ಚಿತ್ರ’ದ ಆನಂದರಾಯರು, ರಾಜಾರಾಯರು ಮೊದಲಾದವು. ತಿಂಡಿ ಸುಬ್ಬ ನಮ್ಮ ನಡುವಣ ಒಬ್ಬನಾದರೂ ಅವನ ನಡೆ, ನುಡಿ, ಆಹಾರ, ಜೀವನದೃಷ್ಟಿ, ಪ್ರೀತಿ-ದ್ವೇಷಗಳು ಅವನ ಮಾರ್ಜಾಲ ಪ್ರೀತಿ, ಅದರ ಇಲಿ ಬೇಟೆ ಮಾಯಾವಾಸ್ತವದಂತೆಯೇ ಅನುಭವವಾಗುತ್ತವೆ. ರಾಜಾರಾಯರಂಥ ಪಾತ್ರಗಳ ನಡೆನುಡಿ ವಾಸ್ತವ ಎನ್ನಿಸಿದರೂ ಅವು ಅಸಂಗತ ಎನ್ನಿಸುವುದು ಬುದ್ಧಿ ಮತ್ತು ವಾಸ್ತವಿಕತೆಗಳ ನಡುವಣ ಸಂಗತವಲ್ಲದ ಅಂತರದಿಂದಾಗಿ. ಇನ್ನು ‘ಅವತಾರ’ವಂತೂ ಏಕಕಾಲಕ್ಕೆ ಮನುಷ್ಯನ ಮಂಡೂಕ ಪ್ರವೃತ್ತಿಯ ವ್ಯಂಗ್ಯವೂ ಆಗಿ ಯಥಾರ್ಥ ಬದುಕಿನ ವಾಸ್ತವತೆಯ ಚಿತ್ರವೂ ಆಗಿ ಕೊನೆಗೆ ಪಡೆಯುವ ತಿರುವಿನಿಂದ ನಮ್ಮನ್ನು ದಂಗುಪಡಿಸುತ್ತದೆ. ಇಲ್ಲಿನ ಪಾತ್ರಗಳು ಮತ್ತು ಅವುಗಳ ವರ್ತನೆ ಅಡಿಗರ ನವ್ಯದ ಪ್ರತಿಮೆಗಳ ಅವತಾರದಂತೆಯೇ ಗೊಂದಲಪುರವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಇಲ್ಲಿ ಬದುಕಿನ ಅಸಂಗತ್ವವೂ ಉಂಟು, ವಾಸ್ತವದ ತೀವ್ರತೆಯೂ ಉಂಟು, ಪವಿತ್ರ ಗಂಗಾಮೂಲವಾದ ಬಾವಿಯೊಳಗಿಂದ ಹೊರಬರುವ ಪಳೆಯುಳಿಕೆಗಳ ನಿರರ್ಥಕತೆಯೂ ಉಂಟು. ಆದರೆ ಕೊನೆಯಲ್ಲಿ ಸಿಗುವ ಆಮೆಯಿಂದಾಗಿ ಕೂರ್ಮಾವತಾರದ ಸಾಂಕೇತಿಕ ಮಹತ್ವ ನಮ್ಮ ಅರಿವಿಗೆ ಬಂದು ವಿಚಲಿತರಾಗುತ್ತೇವೆ. ಇದೇನು ಹೀನಾಯಸ್ಥಿತಿ ಮುಟ್ಟಿದ ಬದುಕಿನಲ್ಲಿ ಪುನರುತ್ಥಾನದ ಆಶಾಕಿರಣವೇ? ಅಥವಾ ಕೇವಲ ಲೇವಡಿಯೇ? ಎಂದು ಪ್ರಶ್ನಿಸುವಂತಾಗುತ್ತದೆ. ಕೊನೆಯಲ್ಲಿ ಬಾವಿಯಲ್ಲಿ ಹೊಸನೀರು ಬಂದು ಕಪನೀಪತಿ ಅದನ್ನು ಪಾನಮಾಡುವುದು ಇಂಥ ಪ್ರಶ್ನೆಗೆ ಪುಷ್ಟಿಕೊಡುತ್ತದೆ. ಆದರೆ ಕಥೆಗೆ ಪುನರುತ್ಥಾನ ಹೊಳೆಯಿಸುವಂಥ ಗಟ್ಟಿಯಾದ ಬೆನ್ನೆಲುಬು ಇಲ್ಲವಾದ್ದರಿಂದ ಇದೊಂದು ಬದುಕಿನ ದಾರುಣಚಿತ್ರವಾಗಿಯೇ ಪರಿಣಾಮಕಾರಿಯಾಗುತ್ತದೆ.

ಶೇಷಾದ್ರಿ ಕಿನಾರ ಅವರಿಗೆ ಭಾಷೆಯ ಧ್ವನಿಶಕ್ತಿ ಮರ್ಮಗಳ ಅರಿವಿದೆ. ಅವರ ಭಾಷೆ ಚಿತ್ರವತ್ತಾಗಿ ಸ್ಫಟಿಕಸದೃಶವೂ ಹೌದು, ಧ್ವನಿಪೂರ್ಣವೂ ಹೌದು. ಕಥೆ ಕಟ್ಟುವ ಕಲಾವಂತಿಕೆ ಶೇಷಾದ್ರಿ ಕಿನಾರರಿಗೆ ಕರಗತವಾಗಿದೆ ಎನ್ನುವುದಕ್ಕೆ ಅವರ ‘ಚಿಟ್ಟೆ’ಯಂಥ ಕೆಲವು ಕಿರುಗಥೆಗಳು ನಿದರ್ಶನವಾಗಿ ಸಿಗುತ್ತವೆ. ದಟ್ಟವಾದ ವಿವರಗಳಿಂದ ಪುಟಿಯುವ ‘ಅವತಾರ’, ‘ತಿಂಡಿಸುಬ್ಬ’ ‘ಹುಚ್ಚೋಬೆಪ್ಪೋಶಿವಲೀಲೆಯೋ’-ಇತ್ಯಾದಿ ಬದುಕಿನ ಬವಣೆಗಳ ವಿರಾಡ್ರೂಪಿ ಕಥೆಗಳ ಮಧ್ಯೆ ‘ಚಿಟ್ಟೆ’, ‘ಹಾವೊಳು ಹೂವೆ’, ‘ಧಾರೆ’ಯಂಥ ಕಾವ್ಯಾತ್ಮಕ ಕಿರುಗತೆಗಳು ಕಿನಾರರ ಸೃಜನಶೀಲ ಪ್ರತಿಭೆಯ ಸಾಧ್ಯತೆಗಳಿಗೆ ತೋರುಬೆರಳಾಗುತ್ತವೆ. ಮಾಸ್ತಿ ಕಥಾ ಪುರಸ್ಕಾರದ ಇನ್ನೊಬ್ಬ ಕತೆಗಾರ ಎ.ಎನ್.ಪ್ರಸನ್ನ ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಕಲೆ, ಸಾಹಿತ್ಯ ಸಿನೆಮಾಗಳ ಗೀಳು ಅಂಟಿಸಿಕೊಂಡವರು. ನವ್ಯದ ಉಚ್ಛ್ರಾಯ ಕಾಲದಲ್ಲೆ ಸಣ್ಣ ಕತೆಗಳ ರಚನೆಯಲ್ಲಿ ತೊಡಗಿಕೊಂಡ ಪ್ರಸನ್ನ ಆಧುನಿಕ ಸಂವೇದನೆಯ ಬರಹಗಾರರು. ಇಲ್ಲಿಯವರೆಗೆ ಅವರ ನಾಲ್ಕು ಕಥಾ ಸಂಕಲನಗಳು ಪ್ರಕಟವಾಗಿವೆ. ‘ಆ ಊರಿನಲ್ಲಿ’, ‘ಉಳಿದವರು’, ‘ಪಾರಿವಾಳಗಳು’, ‘ಪ್ರತಿಫಲನ’ ಪ್ರಸನ್ನರ ಕಥಾ ಸಂಕಲನಗಳು. ಪ್ರಸನ್ನರು ಅನುವಾದ ಕ್ಷೇತ್ರದಲ್ಲೂ ತಮ್ಮ ಸೃಜನಶೀಲ ಪ್ರತಿಭೆಯ ಛಾಪು ಮೂಡಿಸಿದವರು. ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ‘ಒನ್‌ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’-ನೂರು ವರ್ಷಗಳ ಏಕಾಂತ, ಸಾಮ್ಯುಯಲ್ ಬೆಕೆಟ್‌ನ ‘ವೇಟಿಂಗ್ ಫಾರ್ ಗಾಡೋ’ ನಾಟಕ ಮೊದಲಾದ ಅವರ ಮುಖ್ಯ ಅನುವಾದಿತ ಕೃತಿಗಳು. ‘ಚಿತ್ರ ಕಥೆಯ ಸ್ವರೂಪ’ ಸಿನೆಮಾ ಕೃತಿಯಾದರೆ, ‘ಸಂಬಂಧಗಳು’, ‘ಅಪ್ಪಮಗ’ ಪ್ರಸನ್ನ ನಿರ್ದೇಶಿಸಿರುವ ದೂರದರ್ಶನ ಚಿತ್ರಗಳು. ಪ್ರಸನ್ನರ ಪ್ರಾರಂಭಿಕ ಕತೆಗಳಲ್ಲಿ ಒಂದಾದ ‘ಹೊಳೆಗೆ ಹೋದದ್ದು’ ಶುರುವಿಗೇ ವಿಮರ್ಶಕರ ಗಮನಸೆಳೆದ ಕಥೆ. ತ್ರಿಕೋನ ಪ್ರೇಮ ಸಂಬಂಧದ ಈ ಕಥೆ ಕಥಾನಾಯಕಿಯ ಆತ್ಮನಿರೂಪಣೆಯಿಂದ ಪ್ರಾರಂಭವಾಗಿ, ತಲ್ಲಣಕರ ಘಟನೆಯೊಂದರ ನಿರೂಪಣೆಯಲ್ಲಿ ಮುಕ್ತಾಯಗೊಂಡು ಓದುಗರಿಗೆ ಹೊಸ ಅನುಭವವನ್ನು ತಾಕಿಸುವುದರಲ್ಲಿ ಯಶಸಿಯಾಗುತ್ತದೆ.

ಇಂತಹ ಕೆಲವು ಪರಿಣಾಮಕಾರಿ ಕಥೆಗಳನ್ನು ಕೊಟ್ಟಿರುವ ಪ್ರಸನ್ನರ ‘ಪ್ರತಿಫಲನ’ ಮಾಸ್ತಿ ಕಥಾ ಪುರಸ್ಕಾರಕ್ಕೆ ಪಾತ್ರವಾಗಿರುವ ಸಂಕಲನ. ಪ್ರಸನ್ನರಿಗೆ ಕಥೆ ಹೇಳುವ ಕಲೆ ಕರಗತವಾಗಿದೆ. ಪ್ರಯೋಶೀಲತೆ ಅವರ ಕಥೆಗಳಲ್ಲಿ ಎದ್ದು ಕಾಣುವ ಗುಣ. ಆರು ಕಥೆಗಳನ್ನೊಳಗೊಂಡಿರುವ ‘ಪ್ರತಿಫಲನ’ದಲ್ಲೂ ಇದು ಢಾಳಾಗಿ ಕಾಣಿಸುತ್ತದೆ. ಮಾಯಾವಾಸ್ತವ ತಂತ್ರದ ‘ಬಾಂಬೆ ಶೋ’ ಇದಕ್ಕೆ ಉತ್ತಮ ನಿದರ್ಶನವಾಗಬಲ್ಲದು. ಬಯಸಿದ್ದೆಲ್ಲವನ್ನೂ ತೋರಿಸುವ ಈ ‘ರಾಜಾದೇಖೋ-ರಾಣಿದೇಖೊ’ ಮಾಂತ್ರಿಕ ಪೆಟ್ಟಿಗೆ ಧಿಡೀರನೆ ಕಥಾನಾಯಕನನ್ನು ಆಕರ್ಷಿಸಿ ಕೊನೆಗೆ ಅವನ ಸ್ಥಾನವನ್ನೇ ಆಕ್ರಮಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆದು, ಊರ ಜನರಲ್ಲಿ ಅದ್ಭುತ ಆಸಕ್ತಿ ಮೂಡಿಸಿ ಆಖೈರಾಗಿ ರೋಚಕತೆ, ಉನ್ಮಾದ, ಅದೃಷ್ಟಪರೀಕ್ಷೆ, ಕ್ರೌರ್ಯ ಹಾಗೂ ಹಿಂಸೆಯನ್ನು ಬಯಸುವಯುವಪೀಳಿಗೆಯ ಅನಾದರಕ್ಕೆ ಗುರಿಯಾಗಿ ಕೊನೆಗೊಂದು ದಿನ ಮಾಯವಾಗುತ್ತದೆ. ಅಗಾಧ ಧ್ವನಿಶಕ್ತಿಯುಳ್ಳ ಮತ್ತು ಅನೇಕ ನೆಲೆಗಳಲ್ಲಿ ಅರ್ಥೈಸಬಹುದಾದ ಈ ‘ಬಾಂಬೆ ಶೋ’ ಬದಲಾದ ಪ್ರೇಕ್ಷಕರ ಅಭಿರುಚಿಯಿಂದ ಇಂದು ಸೊರಗಿರುವ ಪ್ರಾಚೀನ ಕಲೆಗಳನ್ನು ಧ್ವನಿಸುತ್ತದೆ ಎನ್ನುವ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರ ಮಾತು ಯುಕ್ತವಾದುದೇ ಆಗಿದೆ. ‘ಸೋಫಾ’ ಮಾಯಾವಾಸ್ತವ ತಂತ್ರದ ಇನ್ನೊಂದು ಕಥೆಯಾದರೆ ಉಳಿದ ನಾಲ್ಕು ಸ್ತ್ರೀ ಕೇಂದ್ರಿತ. ‘ಆಗಮನ’ ಮತ್ತು ‘ಪ್ರತಿಫಲನ’ ಸ್ತ್ರೀಯರ ಮೇಲಿನ ಅತ್ಯಾಚಾರದಂಥ ಅಪರಾಧಗಳನ್ನು ಬಿಂಬಿಸುತ್ತಲೇ ಇಂಥ ಸಂದರ್ಭ-ಸನ್ನಿವೇಶಗಳಲ್ಲಿನ ಸಂವೇದನೆಯನ್ನು-ನೋವು-ಸಂಕಟ -ಅಸಹಾಯಕತೆ-ಜಿಗುಪ್ಸೆ-ವಿಶಿಷ್ಟ ಅನುಭವವಾಗಿಕಟ್ಟಿಕೊಡುವುದರಲ್ಲಿ ಹಾಗೂ ಇಂಥ ಪರಿಸ್ಥಿತಿಯಲ್ಲಿ ಸ್ತ್ರೀಯರಲ್ಲಿ ಮೂಡುವ ಹೋರಾಟದ ಛಲವನ್ನು ಗುರುತಿಸಿ ಅವರ ಹೋರಾಟದ ಛಲವನ್ನು ನಿರೂಪಿಸುವ ಪರಿಯಿಂದಾಗಿ ಈ ಕಥೆಗಳು ನಮ್ಮ ಮನಸ್ಸಿನಲ್ಲಿ ನಿಲ್ಲುತ್ತವೆ

ಪ್ರಸನ್ನರಿಗೆ ಕಥನ ತಂತ್ರದಂತೆಯೇ ಭಾಷೆಯನ್ನು ಅದರೆಲ್ಲ ಧ್ವನಿಶಕ್ತಿಯೊಂದಿಗೆ ದುಡಿಸಿಕೊಳ್ಳುವ ಪ್ರತಿಭೆ ಇದೆ. ಆಧುನಿಕ ಸಂವೇದನೆಗೆ ಯೋಗ್ಯವಾದ ಅವರ ಶಿಷ್ಟಭಾಷೆ ಇಂದಿನ ಪ್ರಪಂಚದ ತಣ್ಣನೆಯ ಕ್ರೌರ್ಯವನ್ನೂ ಸೋಗಲಾಡಿತನ -ಉದ್ವೇಗ-ತುಡಿತಗಳನ್ನೂ ತಿಳಿನೀರ ಕನ್ನಡಿಯಂತೆ ಪ್ರತಿಬಿಂಬಿಸುವಷ್ಟು ಪಾರದರ್ಶಕವಾದುದು.

ಬರುವ ಶನಿವಾರ(ಜೂನ್29) ಮಾಸ್ತಿ ಪ್ರಶಸ್ತಿ ಮತ್ತು ಮಾಸ್ತಿ ಕಥಾ ಪುರಸ್ಕಾರ ಪ್ರದಾನವಾಗಲಿದೆ. ವಿಜೇತರೆಲ್ಲರಿಗೂ ನೇಸರಾಭಿನಂದನೆಗಳು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News