ಡೊನಾಲ್ಡ್ ದಾಖಲೆ ಮುರಿದ ಇಮ್ರಾನ್ ತಾಹಿರ್

Update: 2019-06-23 13:58 GMT

 ಲಂಡನ್, ಜೂ.23: ದಕ್ಷಿಣ ಆಫ್ರಿಕದ ಸ್ಪಿನ್ನರ್ ಇಮ್ರಾನ್ ತಾಹಿರ್ ರವಿವಾರ ಪಾಕಿಸ್ತಾನದ ಆರಂಭಿಕ ದಾಂಡಿಗರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಕ್ಷಿಣ ಆಫ್ರಿಕದ ಆ್ಯಲನ್ ಡೊನಾಲ್ಡ್ ದಾಖಲೆ ಮುರಿದಿದ್ದಾರೆ.

 ಇದೀಗ ತಾಹಿರ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ಪರ ಗರಿಷ್ಠ ವಿಕಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ವಿಶ್ವಕಪ್‌ನ 25 ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದ ಡೊನಾಲ್ಡ್ 2003ರ ವಿಶ್ವಕಪ್ ಬಳಿಕ ನಿವೃತ್ತರಾಗಿದ್ದರು.

 ತಾಹಿರ್ ತನ್ನ ವಿಶ್ವಕಪ್‌ನ 20ನೇ ಪಂದ್ಯದಲ್ಲಿ ಡೊನಾಲ್ಡ್ ದಾಖಲೆ ಮುರಿದಿದ್ದಾರೆ. 14.5ನೇ ಓವರ್‌ನಲ್ಲಿ ಪಾಕಿಸ್ತಾನದ ಆರಂಭಿಕ ದಾಂಡಿಗ ಫಾಕರ್ ಝಮಾನ್ ಅವರು ತಾಹಿರ್ ಎಸೆತದಲ್ಲಿ ಹಾಶಿಂ ಅಮ್ಲಗೆ ಕ್ಯಾಚ್ ನೀಡಿದರು. ಈ ವಿಕೆಟ್ ಪಡೆಯುವುದರೊಂದಿಗೆ ತಾಹಿರ್ ಅವರು ಡೊನಾಲ್ಡ್ ದಾಖಲೆ ಸರಿಗಟ್ಟಿದರು. 20.3ನೇ ಓವರ್‌ನಲ್ಲಿ ಇನ್ನೊಬ್ಬ ಆರಂಭಿಕ ದಾಂಡಿಗ ಇಮಾಮ್ ಉಲ್ ಹಕ್ ಅವರ ರಿಟರ್ನ್ ಕ್ಯಾಚ್ ಪಡೆದು ತಾಹಿರ್ ದಾಖಲೆ ಬರೆದರು.

ತಾಹಿರ್ ವಿಶ್ವಕಪ್‌ನಲ್ಲಿ ಈ ವರೆಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪೈಕಿ 8ನೇ ಸ್ಥಾನಕ್ಕೆ ಏರಿದ್ದಾರೆ.

39 ಪಂದ್ಯಗಳಲ್ಲಿ 71 ವಿಕೆಟ್‌ಗಳನ್ನು ಪಡೆದಿರುವ ಆಸ್ಟ್ರೇಲಿಯದ ಗ್ಲೆನ್ ಮೆಕ್‌ಗ್ರಾತ್ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 1996ರಿಂದ 2007ರ ತನಕ ನಡೆದ ವಿಶ್ವಕಪ್‌ಗಳಲ್ಲಿ ಆಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News