100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಆಸ್ಪತ್ರೆಯ ಐಸಿಯು ಛಾವಣಿ ಕುಸಿತ

Update: 2019-06-23 15:11 GMT

ಪಾಟ್ನ, ಜೂ.23: ಮೆದುಳು ಜ್ವರದಿಂದಾಗಿ 100ಕ್ಕೂ ಹೆಚ್ಚಿನ ಮಕ್ಕಳು ಸಾವನ್ನಪ್ಪಿರುವ ಬಿಹಾರದ ಮುಝಫ್ಫರ್‌ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ರವಿವಾರ ಆಸ್ಪತ್ರೆಯ ತೀವ್ರನಿಗಾ ಘಟಕದ ಮೇಲ್ಛಾವಣಿ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಬಿಹಾರದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೆದುಳು ಜ್ವರ ಪೀಡಿತ ನೂರಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಮಧ್ಯೆ, ಆಸ್ಪತ್ರೆಯ ಸಮೀಪದ ಅರಣ್ಯಪ್ರದೇಶದಲ್ಲಿ ಹಲವು ಅಸ್ಥಿಪಂಜರ ಶನಿವಾರ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಒಂದೆರಡು ಅಸ್ಥಿಪಂಜರ ಸುಟ್ಟುಹಾಕಿದ ಸ್ಥಿತಿಯಲ್ಲಿದ್ದರೆ ಕೆಲವನ್ನು ಗೋಣಿಚೀಲದಲ್ಲಿ ತುಂಬಿಸಿ ಎಸೆಯಲಾಗಿತ್ತು. ಇನ್ನು ಕೆಲವು ನೆಲದ ಮೇಲೆ ಅಲ್ಲಲ್ಲಿ ಬಿದ್ದಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಅರಣ್ಯದಲ್ಲಿ ನೆಲದಡಿ ದಫನ ಮಾಡಲಾಗಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

 ಬಿಹಾರದಲ್ಲಿ ಮೆದುಳು ಜ್ವರದಿಂದ ಒಟ್ಟು 140 ಮಕ್ಕಳು ಮೃತಪಟ್ಟಿದ್ದು ಇದರಲ್ಲಿ 129 ಮಕ್ಕಳು ಮುಝಫ್ಫರ್‌ಪುರ ಜಿಲ್ಲೆಯಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News