ಬಿಜೆಪಿ-ಟಿಎಂಸಿ ಕಾರ್ಯಕರ್ತರ ಘರ್ಷಣೆ: ಯುವಕನಿಗೆ ಗುಂಡೇಟು

Update: 2019-06-23 16:49 GMT

ಕೋಲ್ಕತಾ, ಜೂ.23: ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯ ಪತ್ರಸಯೆರ್ ಎಂಬಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಯುವಕರು ಗಾಯಗೊಂಡಿದ್ದು ಗುಂಡೇಟು ತಗುಲಿದ ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಡೆದ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಟಿಎಂಸಿ ಕಾರ್ಯಕರ್ತರನ್ನು ಕಂಡ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಂ ಎಂದು ಘೋಷಣೆ ಕೂಗಿದರು. ಈ ಸಂದರ್ಭ ಮಾತಿನ ಚಕಮಕಿ ಆರಂಭವಾಗಿ ಘರ್ಷಣೆ ನಡೆದಿದ್ದು 14 ವರ್ಷದ ಯುವಕನಿಗೆ ಗುಂಡೇಟು ತಗುಲಿದ್ದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಘಟಕಾಧ್ಯಕ್ಷ ದಿಲೀಪ್ ಘೋಷ್, ಜೈಶ್ರೀರಾಂ ಎಂದು ಘೋಷಿಸುವುದೂ ಅಪರಾಧವಾಗುತ್ತದೆಯೇ. ನಾವು ಎಲ್ಲಿಗೆ ಸಾಗುತ್ತಿದ್ದೇವೆ. ಪಶ್ಚಿಮ ಬಂಗಾಳ ಪಾಕಿಸ್ತಾನದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬಂಕುರ ಕ್ಷೇತ್ರದ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದರು. ಘರ್ಷಣೆಯಲ್ಲಿ ಮೂವರು ಯುವಕರಿಗೆ ಗುಂಡೇಟು ತಗುಲಿದೆ. ತಾವು ರಬ್ಬರ್ ಬುಲೆಟ್ ಹಾರಿಸಿದ್ದಾಗಿ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News