ದಾಭೋಲ್ಕರ್ ಹತ್ಯೆ ಪ್ರಕರಣ: ಪುನಲೇಕರ್ ಲ್ಯಾಪ್‌ಟಾಪ್‌ನಲ್ಲಿ ದೊರಕಿದ ಮಾಹಿತಿ ನ್ಯಾಯಾಲಯಕ್ಕೆ ಸಲ್ಲಿಸಿದ ಸಿಬಿಐ

Update: 2019-06-24 16:12 GMT

ಪುಣೆ, ಜೂ. 24: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನ್ಯಾಯವಾದಿ ಸಂಜೀವ್ ಪುನಲೇಕರ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆತನ ಲ್ಯಾಪ್‌ಟಾಪ್‌ನಿಂದ ಹತ್ಯೆಗೆ ಸಂಬಂಧಿಸಿ ಕೆಲವು ಮಾಹಿತಿಗಳು ದೊರಕಿವೆ ಎಂದು ಸಿಬಿಐ ರವಿವಾರ ಪುಣೆ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

 ಪುನಲೇಕರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸಿಬಿಐ ನ್ಯಾಯಾಲಯದಲ್ಲಿ ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪುನಲೇಕರ್‌ಗೆ ಜುಲೈ 6ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಬಗ್ಗೆ ಪುನಲೇಕರ್ ಸಲ್ಲಿಸಿದ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಾಲಯ ಜೂನ್ 25ರಂದು ವಿಚಾರಣೆ ನಡೆಸಲಿದೆ.

ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪುನಲೇಕರ್ ಹಾಗೂ ಆತನ ಸಹವರ್ತಿ, ಸನಾತನ ಸಂಸ್ಥಾದ ಸದಸ್ಯ ವಿಕ್ರಮ್ ಭಾವೆಯನ್ನು ಸಿಬಿಐ ಮೇ 25ರಂದು ಬಂಧಿಸಿತ್ತು. ಅವರು ಜೂನ್ 4ರ ವರೆಗೆ ಸಿಬಿಐ ಕಸ್ಟಡಿಯಲ್ಲಿದ್ದರು.

 ಪುಣೆಯಲ್ಲಿ 2013 ಆಗಸ್ಟ್ 20ರಂದು ಮುಂಜಾನೆಯ ನಡಿಗೆ ಸಂದರ್ಭ ದಾಭೋಲ್ಕರ್ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಈ ಸಂಬಂಧ ಪುನಲೇಕರ್‌ನ ಸಹವರ್ತಿಗಳಾದ ಶರದ್ ಕಲಾಸ್ಕರ್ ಹಾಗೂ ಸಚಿನ್ ಅಂದುರೆಯನ್ನು ಬಂಧಿಸಲಾಗಿತ್ತು.

ಹತ್ಯೆಯಲ್ಲಿ ಬಳಸಲಾದ ಪಿಸ್ತೂಲ್‌ಗಳನ್ನು ವಿಲೇವಾರಿ ಮಾಡಲು ಕಲಾಸ್ಕರ್‌ಗೆ ಸಲಹೆ ನೀಡಿದ ಆರೋಪವನ್ನು ಪುನಲೇಕರ್ ಎದುರಿಸುತ್ತಿದ್ದಾನೆ. 2017ರಲ್ಲಿ ನಡೆದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಕೂಡ ಕಲಾಸ್ಕರ್‌ನೊಂದಿಗೆ ಪುನಲೇಕರ್ ಸೇರಿದ್ದ ಎಂದು ಸಿಬಿಐ ಸಂಶಯಿಸಿದೆ.

ಪುನಲೇಕರ್‌ನ ಸಲಹೆಯಂತೆ ಕಲಾಸ್ಕರ್ ವರ್ತಿಸಿದ್ದ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಸೇರಿದಂತೆ ನಾಲ್ಕು ಪಿಸ್ತೂಲ್‌ಗಳನ್ನು ಥಾಣೆ ಕ್ರೀಕ್‌ನಲ್ಲಿ ಎಸೆದಿದ್ದ. ಪುನಲೇಕರ್ ಸಲ್ಲಿಸಿದ ಜಾಮೀನು ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ. ದಾಭೋಲ್ಕರ್ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ಗಳನ್ನು ವಿಲೇವಾರಿ ಮಾಡಲು ಕಲಾಸ್ಕರ್‌ಗೆ ಸಲಹೆ ನೀಡುವ ಮೂಲಕ ಪುನಲೇಕರ್ ನ್ಯಾಯವಾದಿಯ ಮಿತಿಯನ್ನು ದಾಟಿದ್ದಾರೆ ಎಂದು ಸಿಬಿಐ ಜೂನ್ 17ರಂದು ನ್ಯಾಯಾಲಯದ ಮುಂದೆ ವಾದಿಸಿತ್ತು.

    ಲ್ಯಾಪ್‌ಟಾಪ್‌ನಿಂದ ದತ್ತಾಂಶಗಳನ್ನು ಪಡೆಯಲು ಪುನಲೇಕರ್‌ನನ್ನು ತನ್ನ ಕಸ್ಟಡಿಗೆ ನೀಡುವಂತೆ ಕೋರಿ ಸಿಬಿಐ ಜೂನ್ 19ರಂದು ಮನವಿ ಸಲ್ಲಿಸಿತ್ತು. ಮೇ 27ರಂದು ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್‌ನಿಂದ 'ದಾಬೋಲ್ಕರ್' ಹಾಗೂ 'ದೋಷಾ ರೋಪಣೆ ಪತ್ರ' ಎಂಬ ಎರಡು ಫೋಲ್ಡರ್‌ಗಳ ತನಿಖೆಗೆ ಪುನಲೇಕರ್‌ನನ್ನು ಕಸ್ಟಡಿ ವಿಚಾರಣೆ ನಡೆಸಬೇಕು ಎಂದು ಸಿಬಿಐ ಜೂನ್ 20ರಂದು ನ್ಯಾಯಾಲಯದ ಮುಂದೆ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News