ಬಿಹಾರ: ಮೆದುಳಿನ ಉರಿಯೂತದಿಂದ ಸತ್ತವರ ಸಂಖ್ಯೆ 152ಕ್ಕೆ ಏರಿಕೆ

Update: 2019-06-24 16:14 GMT

ಪಾಟ್ನ, ಜೂ.24: ಬಿಹಾರದಲ್ಲಿ ತೀವ್ರ ಮೆದುಳಿನ ಉರಿಯೂತದ ರೋಗದಿಂದ ಸತ್ತವರ ಸಂಖ್ಯೆ 152ಕ್ಕೇರಿದ್ದು , ರಾಜ್ಯದ 20 ಜಿಲ್ಲೆಗಳಿಗೆ ರೋಗ ಹರಡಿದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಮುಝಫ್ಫರ್‌ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಮಗುವೊಂದು ಮೃತಪಟ್ಟಿದ್ದು ಈ ರೋಗ ರಾಜ್ಯದಲ್ಲಿನ 38 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಿಗೆ ಹಬ್ಬಿದೆ. ಆದರೆ ರೋಗದಿಂದ ಸಾವಿಗೀಡಾಗುವವರ ಪ್ರಮಾಣ ಇಳಿಮುಖವಾಗಿದ್ದು, ಕಳೆದ 36 ಗಂಟೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಬಿಹಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಹೇಳಿದ್ದಾರೆ.

ಮೆದುಳಿನ ಉರಿಯೂತದಿಂದ ಸಾವನ್ನಪ್ಪಿದ್ದ ಪ್ರಥಮ ಪ್ರಕರಣ ಜೂನ್ 5ರಂದು ದಾಖಲಾದಂದಿನಿಂದ ರಾಜ್ಯ ಸರಕಾರದ ಪ್ರತಿಕ್ರಿಯೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮುಝಫ್ಫರ್‌ಪುರದಲ್ಲಿ ಸಮರ್ಪಕ ಆರೋಗ್ಯ ವ್ಯವಸ್ಥೆಯ ಕೊರತೆ ರೋಗ ತೀವ್ರಗೊಳ್ಳಲು ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತವಾಗಿರುವಂತೆಯೇ ರವಿವಾರ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರನಿಗಾ ಘಟಕದ ಕಟ್ಟಡದ ಛಾವಣಿ ಕುಸಿದುಬಿದ್ದಿದೆ.

ರವಿವಾರ ಕಾಂಗ್ರೆಸ್‌ನ ನಿಯೋಗವೊಂದು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಯಿತು. ಮತ್ತೊಂದು ಘಟನೆಯಲ್ಲಿ ಎಲ್‌ಜೆಪಿ ಶಾಸಕ ವೈಶಾಲಿ ಗ್ರಾಮಕ್ಕೆ ಭೇಟಿ ನೀಡಿ ಮೆದುಳಿನ ಉರಿಯೂತದಿಂದ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದಾಗ ಗ್ರಾಮಸ್ಥರು ಅವರ ವಾಹನಕ್ಕೆ ಮುತ್ತಿಗೆ ಹಾಕಿದರಲ್ಲದೆ ಅವರನ್ನು ಗುಡಿಸಲೊಂದಕ್ಕೆ ಬಲವಂತವಾಗಿ ಸೆಳೆದೊಯ್ದು ಒತ್ತೆಸೆರೆಯಲ್ಲಿರಿಸಿದ ಘಟನೆ ವರದಿಯಾಗಿದೆ. ಬಳಿಕ ಶಾಸಕರ ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದೆ. ಶಾಸಕರನ್ನು ಕರೆದೊಯ್ದ ಕಾರಿನ ಮೇಲೆ ಗ್ರಾಮಸ್ಥರು ಕಲ್ಲೆಸೆದಿದ್ದಾರೆ ಎಂದು ವರದಿಯಾಗಿದೆ.

 ಈ ಮಧ್ಯೆ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಕಾರಣಕ್ಕೆ ಪಾಟ್ನ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಹಿರಿಯ ವೈದ್ಯ ಡಾ ಭೀಮಸೇನ್ ಕುಮಾರ್‌ರನ್ನು ಅಮಾನತುಗೊಳಿಸಿ ಬಿಹಾರದ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಜೂನ್ 20ರಂದು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಕುಮಾರ್ ಗೈರುಹಾಜರಾಗಿದ್ದರು. ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲೂ ಮೆದುಳಿನ ಉರಿಯೂತ ಕಾಯಿಲೆಯ ಬಗ್ಗೆ ಆತಂಕ ಮೂಡಿದ್ದು ರವಿವಾರ 8 ವರ್ಷದ ಬಾಲಕನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈತ ಮೆದುಳಿನ ಉರಿಯೂತ ಕಾಯಿಲೆ ಪೀಡಿತನಾಗಿದ್ದ ಎಂದು ವೈದ್ಯರು ತಿಳಿಸಿದ್ದಾಗಿ ಬಾಲಕನ ತಂದೆ ಹೇಳಿದ್ದಾರೆ.

 ಆದರೆ ಬಾಲಕನ ಸಾವಿಗೆ ಮೆದುಳಿನ ಉರಿಯೂತ ಕಾರಣ ಎಂದು ಈಗಲೇ ಹೇಳಲಾಗದು. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಸ್ಪಷ್ಟವಾಗಲಿದೆ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಾಲಕನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ ಎಂದು ಮಧ್ಯಪ್ರದೇಶದ ಆರೋಗ್ಯ ಸಚಿವ ತುಲಸಿ ಸಿಲಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News