ಅಟಾರ್ನಿಯಾಗಿ ಜೆಫ್ ಸೆಶನ್ಸ್ ನೇಮಕ ದೊಡ್ಡ ತಪ್ಪು: ಟ್ರಂಪ್

Update: 2019-06-24 16:51 GMT

ವಾಶಿಂಗ್ಟನ್, ಜೂ. 24: ಹಿಂದೆ ಮಾಡಿದ ತಪ್ಪನ್ನು ಸರಿಪಡಿಸುವ ಒಂದು ಅವಕಾಶ ನನಗೆ ಸಿಕ್ಕಿದರೆ, ಜೆಫ್ ಸೆಶನ್ಸ್‌ರನ್ನು ಅಮೆರಿಕದ ಅಟಾರ್ನಿ ಜನರಲ್ ಆಗಿ ನಾನು ಮಾಡಿದ ಮೊದಲ ನೇಮಕವನ್ನು ಸರಿಪಡಿಸಲು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.

‘‘ಜೆಫ್ ಸೆಶನ್ಸ್‌ರನ್ನು ನನ್ನ ಮೊದಲು ಅಟಾರ್ನಿ ಜನರಲ್ ಆಗಿ ನೇಮಿಸಿ ತಪ್ಪು ಮಾಡಿದೆ. ಅದು ನನ್ನ ಅತ್ಯಂತ ದೊಡ್ಡ ತಪ್ಪಾಗಿದೆ’’ ಎಂದು ಎನ್‌ಬಿಸಿ ಸುದ್ದಿ ವಾಹಿನಿಯ ‘ಮೀಟ್ ದ ಪ್ರೆಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು. ಈ ಸಂದರ್ಶನವು ರವಿವಾರ ಪ್ರಸಾರಗೊಂಡಿತು.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪ್ರಚಾರ ತಂಡವು ರಶ್ಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿತ್ತು ಎಂಬ ಆರೋಪಗಳಿಂದ ಟ್ರಂಪ್ ಸರಕಾರ ಇನ್ನೂ ಹೊರಬಂದಿಲ್ಲ.

ಪ್ರಚಾರದ ವೇಳೆ, 2016ರಲ್ಲಿ ಅಲಬಾಮದ ಮಾಜಿ ರಿಪಬ್ಲಿಕನ್ ಸೆನೆಟರ್ ಜೆಪ್ ಸೆಶನ್ಸ್ ಟ್ರಂಪ್‌ರ ಆಪ್ತ ವಲಯದಲ್ಲಿದ್ದರು. ಟ್ರಂಪ್‌ರ ಆಪ್ತ ಸಲಹೆಗಾರರಾಗಿದ್ದ ಸೆಶನ್ಸ್ ಪ್ರಚಾರಾವಧಿಯಲ್ಲಿ ರಶ್ಯ ರಾಯಭಾರಿ ಸರ್ಗಿ ಕಿಸ್‌ಲ್ಯಾಕ್‌ರನ್ನು ಭೇಟಿಯಾಗಿದ್ದರು.

ಟ್ರಂಪ್ ಅಧ್ಯಕ್ಷರಾದ ಬಳಿಕ, ಸೆಶನ್ಸ್‌ರನ್ನು ಅಟಾರ್ನಿ ಜನರಲ್ ಆಗಿ ನೇಮಿಸಿದರು. 2107ರ ಸೆನೆಟ್ ವಿಚಾರಣೆಯಲ್ಲಿ, ತನಗೆ ರಶ್ಯನ್ನರೊಂದಿಗೆ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದು ಹೇಳಿದ್ದರು.

ಆದರೆ, ಅವರು ರಶ್ಯನ್ನರೊಂದಿಗೆ ಹೊಂದಿದ್ದ ಸಂಪರ್ಕ ಮತ್ತೆ ಬೆಳಕಿಗೆ ಬಂತು. 2018 ನವೆಂಬರ್‌ನಲ್ಲಿ ಅವರು ರಾಜೀನಾಮೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News