ಮೆದುಳು ಜ್ವರ: ಎರಡು ಮಕ್ಕಳನ್ನು ಕಳಕೊಂಡ ದಂಪತಿ

Update: 2019-06-25 06:13 GMT

ಬಿಹಾರ, ಜೂ.25: ಜೂನ್ 15ರಂದು ಬೆಳಗ್ಗೆ 5 ಗಂಟೆಗೆ ಕಬೂತ್ರಿ ದೇವಿ ಎದ್ದಾಗ ಆಕೆಯ ಏಳು ವರ್ಷದ ಪುತ್ರಿ ಸುಗಂತಿ ತೀವ್ರ ಅಸ್ವಸ್ಥಳಾಗಿದ್ದಳು. ಸಂಜೆಯ ಹೊತ್ತಿಗೆ ಆಕೆ ಬಿಹಾರದಲ್ಲಿ ಈಗಾಗಲೇ ಕನಿಷ್ಠ 152 ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಮೆದುಳಿನ ಉರಿಯೂತ(ಅಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಂ) ಎಂಬ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಳು. ಆ ಯುವ ತಾಯಿ ತನ್ನ ಪುಟ್ಟ ಮಗಳನ್ನು ತನ್ನ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ತೊರೆಯ ಪಕ್ಕದಲ್ಲಿ ದಫನ ಮಾಡಿದ್ದಳು.

ಮರುದಿನ ಬೆಳಿಗ್ಗೆ ಕಬೂತ್ರಿ ಎದ್ದಾಗ ಆಕೆಗೆ ಮತ್ತೊಂದು ಆಘಾತ ಕಾಡಿತ್ತು. ಆಕೆಯ ಕಿರಿಯ ಮಗಳು, ಐದು ವರ್ಷದ ರೂಪಂತಿ ಕೂಡ ತೀವ್ರ ಅಸ್ವಸ್ಥಳಾಗಿದ್ದಳು. ಆಕೆಯೂ ಅದೇ ಸಂಜೆ ಮೃತಪಟ್ಟಾಗ ಸೋದರಿಯನ್ನು ದಫನ ಮಾಡಿದ ಸ್ಥಳದ ಪಕ್ಕದಲ್ಲಿಯೇ ಆಕೆಯ ಅಂತ್ಯಕ್ರಿಯೆ ನಡೆಸಲಾಯಿತು.

ಕೇವಲ 24 ಗಂಟೆಗಳ ಅವಧಿಯಲ್ಲಿ ಕಬೂತ್ರಿ ತನ್ನಿಬ್ಬರು ಪುತ್ರಿಯರನ್ನು ಕಳೆದುಕೊಂಡಿದ್ದಳು. ಆಕೆಯ ಮನೆಯಿಂದ ಮೂರು ಕಿ.ಮೀ. ದೂರದಲ್ಲಿನ ಚಕಿಯಾ ಬ್ಲಾಕಿನ ಜಿತೋರ ಗೋಪಾಲಪುರ ಗ್ರಾಮದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಮೆದುಳಿನ ಉರಿಯೂತ ರೋಗಿಗಳಿಗೆ ಐದು ಹಾಸಿಗೆಗಳ ಘಟಕವಿದ್ದರೂ ಆಕೆಗೆ ತನ್ನಿಬ್ಬರು ಪುತ್ರಿಯರ ಜೀವವುಳಿಸುವುದು ಸಾಧ್ಯವಾಗಿಲ್ಲ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೇರಿ ಸಂಸತ್ತಿನ ಮೊದಲ ಅಧಿವೇಶನ ಆರಂಭಗೊಂಡಿದ್ದರೂ ಬಿಹಾರದ ಈ ದುರಂತ ಕಥೆ ಬೇರೆಯೇ ಲೋಕದಲ್ಲಿ ನಡೆದಿದೆಯೇನೋ ಎಂಬಂತೆ ಸರಕಾರ ಹಾಗೂ ವಿಪಕ್ಷಗಳೂ ಹೆಚ್ಚಿನ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಡವರ ಮಕ್ಕಳು ಸತ್ತಿರುವುದರಿಂದ ಯಾರಿಗೂ ಅದರ ಪರಿವೆಯಿಲ್ಲ ಎಂದು ತನ್ನ ಮೂರು ವರ್ಷದ ಪುತ್ರಿ ನೇಹಾಳನ್ನು ಕಳೆದುಕೊಂಡಿರುವ ಅದೇ ಗ್ರಾಮದ ಬುಧನ್ ಮಂಝಿ ಹೇಳುತ್ತಾನೆ.

ಕಬೂತ್ರಿಯ ಪತಿ ಸಂಧು ಮಂಝಿ ದೂರದ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಾರನಾಗಿದ್ದು, ದಿನಕ್ಕೆ ರೂ.200ರಿಂದ ರೂ.300 ಸಂಬಳ ಗಳಿಸುತ್ತಾನೆ. ಪುತ್ರಿಯರು ಮೃತಪಟ್ಟಾಗ ಆತ ಅಲ್ಲಿರದೇ ಇದ್ದರೂ ಇದೀಗ ಮರಳಿದ್ದಾನೆ. ಈ ಕುಟುಂಬ ಹಸಿವಿನಿಂದ ನರಳದೇ ಇದ್ದರೂ ಅನ್ನ, ಇಲ್ಲವೇ ಚಪಾತಿ ಸಾರು ಅವರ ನಿತ್ಯದ ಆಹಾರವಾಗಿದೆ. ಆದರೆ ಹಾಲು ಹಾಗೂ ಮೊಟ್ಟೆ ನೀಡುವಷ್ಟು ಉತ್ತಮ ಆರ್ಥಿಕ ಸ್ಥಿತಿ ಅವರದಲ್ಲ.

ಕಬೂತ್ರಿಯ ಇಬ್ಬರು ಪುತ್ರಿಯರೂ ಚಿಕಿತ್ಸೆ ಪಡೆದ ಹೊರತಾಗಿಯೂ ಸಾವನ್ನಪ್ಪಿದ ಚಕಿಯಾದ ಸರಕಾರಿ ಆಸ್ಪತ್ರೆಯನ್ನು 2017ರಲ್ಲಿ ಉಪವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಇಲ್ಲಿ ಕೆಲವೇ ಕೆಲವು ಮೆದುಳಿನ ಉರಿಯೂತದ ರೋಗಿಗಳನ್ನು ದಾಖಲಿಸಲಾಗುತ್ತದೆಯಾದರೂ ಹೆಚ್ಚಿನವರನ್ನು ಮುಝಫ್ಫರಪುರ್ ನ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲಿಂದ ಸುಮಾರು 60 ಕಿ.ಮೀ. ದೂರವಿರುವ ಈ ಆಸ್ಪತ್ರೆ ಸದಾ ರೊಗಿಗಳಿಂದ ತುಂಬಿರುತ್ತದೆ. ಕೈದಿಗಳಿಗೆಂದಿರುವ ವಾರ್ಡನ್ನು ಎನ್ಸಿಫಾಲಿಟಿಸ್ ವಾರ್ಡ್ ಆಗಿ ಈ ಆಸ್ಪತ್ರೆ ಪರಿವರ್ತಿಸಬೇಕಾಗಿ ಬಂದಿದ್ದರೆ, ಚಕಿಯಾ ಆಸ್ಪತ್ರೆಯಲ್ಲಿ ಎನ್ಸಿಫಾಲಿಟಿಸ್ ರೋಗಿಗಳಿಗೆಂದಿರುವ ಘಟಕದ ಹಾಸಿಗಗಳು ಖಾಲಿಯಾಗಿವೆ. ಕಳೆದ ಶನಿವಾರದ ತನಕ ಇಲ್ಲಿ ದಾಖಲಾದ ಒಂಬತ್ತು ಎನ್ಸಿಫಾಲಿಟಿಸ್ ಪ್ರಕರಣದ ರೋಗಿಗಳನ್ನೂ ಮುಝಫ್ಫರಪುರ್ ಆಸ್ಪತ್ರೆಗೆ ತೆರಳುವಂತೆ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News