5 ವರ್ಷಗಳಲ್ಲಿ ದೇಶ ‘ಸೂಪರ್ ಎಮರ್ಜೆನ್ಸಿ’ ಮೂಲಕ ಸಾಗಿ ಬಂದಿದೆ: ಮಮತಾ ಬ್ಯಾನರ್ಜಿ

Update: 2019-06-25 14:33 GMT

ಹೊಸದಿಲ್ಲಿ, ಜೂ. 25: ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ ಕಳೆದ 5 ವರ್ಷಗಳ ಕಾಲ ದೇಶ ‘ಸೂಪರ್ ಎಮರ್ಜೆನ್ಸಿ’ (ತುರ್ತು ಪರಿಸ್ಥಿತಿ) ಮೂಲಕ ಸಾಗಿ ಬಂದಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಪ್ರತಿಪಾದಿಸಿದ್ದಾರೆ.

ಜೂನ್ 25ನ್ನು 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ವರ್ಷಾಚರಣೆ ಎಂದು ಪರಿಗಣಿಸಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ದೇಶ ‘ಸೂಪರ್ ಎಮರ್ಜೆನ್ಸಿ’ ಮೂಲಕ ಸಾಗಿ ಬಂದಿದೆ. ನಾವು ಚರಿತ್ರೆಯಿಂದ ಪಾಠ ಕಲಿಯಬೇಕಿದೆ ಹಾಗೂ ದೇಶದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಯ ಸುರಕ್ಷೆಗೆ ಹೋರಾಡಬೇಕಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆಯೋಜಿಸಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಕಳೆದ ತಿಂಗಳು ಹೊಸ ಸರಕಾರದ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಿರಲಿಲ್ಲ.

ಅನಂತರ ನೀತಿ ಆಯೋಗದ ಸಭೆಯಲ್ಲಿ ಕೂಡ ಪಾಲ್ಗೊಂಡಿರಲಿಲ್ಲ. ಇನ್ನೊಂದೆಡೆ ಪ್ರಧಾನಿ ಮೋದಿ ಅವರು, ‘ಭೀತಿಯಿಂದ ಹಾಗೂ ಭೀತಿರಹಿತ’ವಾಗಿ ತುರ್ತು ಪರಿಸ್ಥಿತಿಯ ಅವಧಿ ವಿರೋಧಿಸಿದವರಿಗೆ ದೇಶ ವಂದನೆ ಸಲ್ಲಿಸುತ್ತದೆ ಎಂದಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ 1975ರಿಂದ 1977ರ ವರೆಗೆ 21 ತಿಂಗಳುಗಳ ಕಾಲ ಜೂನ್ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News